Sunday, 27 April 2014

ಅಮ್ರತೇಶ್ವರಿ ದೇವಸ್ತಾನ ಕೋಟಾ ,ಕುಂದಾಪುರ

ಇತಿಹಾಸ :
ಈ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ತನ್ನ ಅಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು.
ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಟನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವ್ರತಾ ಪಾರಾಯಣಳು, ಸಾಧು ಸ್ವಭಾವದವಳು ಆಗಿದ್ದು ಸದಾಕಾಲ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು.
ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿ ಕೊಂಡು ಕುಂಭಮುಖಿಯು ವನದಲ್ಲಿ ಸಂಚಾರ ಮಾಡುತ್ತಿರಲು ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಆಗ ಇದೇ ಮಾರ್ಗದಲ್ಲಿ ಎಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದುದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯ ಪ್ರಬುದ್ಧನೂ, ಸುಂದರನೂ, ವಿಧ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು.
ಹೀಗಿರಲು ಶೂರ್ಪನಖಿಯು ಪತಿಪ್ರಭೆಯ ಮಗನಾದ ಆ ಋಷಿ ಕುಮಾರನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಬಲತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಎಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ, ಈ ಶಬ್ದವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂತ ತಿಳಿದು, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ " ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯು ಸ್ವರೂಪಳಾಗೆಂದು " ಶಾಪ ಕೊಟ್ಟು ಸಮೀಪದಲ್ಲಿರುವ ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಳು. ಈ ರೀತಿ ಋಷಿ ಪತ್ನಿಯ ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನ ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಸುರನು ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲ ಪುರೋಹಿತರಾದ ಶುಕ್ರಾಚಾರ್ಯರಲ್ಲಿ ಮೊರೆಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು ಖರಸುರನಲ್ಲಿ ಮಾಯಸುರನಿಂದ ನಿರ್ಮಿತವಾದ ಜ್ಯೇಷ್ಠ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು, ಜೋತೆಗೆ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಂಬಿಕೆಯಾದ ಅಮೃತೇಶ್ವರೀ ದೇವಿಯನ್ನ ಪೂಜಿಸಬೇಕೆಂದು ತಿಳಿಸಿದರು.
ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ ಶುಕ್ರಾಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ (ಗಿಳಿಯಾರು, ಹರ್ತಟ್ಟು) ಪ್ರತಿಷ್ಠಿಸಿದನಲ್ಲದೇ ಸಮೀಪದಲ್ಲಿಯೇ ಜಗನ್ಮಾತೆಯಾದ ಅಮೃತೇಶ್ವರೀ ದೇವಿಯನ್ನು ಪತಿಷ್ಠಿಸಿ ದಂಪತಿಗಳೀರ್ವರು ಶುಕ್ರಾಚಾರ್ಯರು ತಿಳಿಸಿದಂತೆ ಉಮಾಮಹೇಶ್ವರರನ್ನು ಪೂಜಿಸುತ್ತಿದ್ದರು.
ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಜ್ಞಾನೋಪದೇಶ ಮಾಡಿದನಲ್ಲದೇ " ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ದ ಮಾಡಿ ಮುಕ್ತಿ ಹೊಂದುವಿ " ಎಂದು ವರವನ್ನು ಅನುಗ್ರಹಿಸಿ, ಅಲ್ಲಿಯವರೆಗೆ ಇದೇ ಸ್ಥಳದಲ್ಲಿ ನೀನು ಪ್ರತಿಷ್ಠಿಸಿದ ಜ್ಯೇಷ್ಠ ಲಿಂಗವನ್ನು ಅರ್ಚಿಸುತ್ತಾ ಇರು. ಅಲ್ಲದೇ ನಿನ್ನ ನಿತ್ಯಕರ್ಮಾನುಷ್ಠಾನಗಳ ಅನುಕೂಲಕ್ಕಾಗಿ ಸರ್ವತೀರ್ಥ ಸಾನಿಧ್ಯಾ ಉಳ್ಳ ಸರೋವರವನ್ನು ನಿರ್ಮಿಸುತ್ತೇನೆಂದು ತಿಳಿಸಿದನಲ್ಲದೇ ಈ ಸರೋವರದಲ್ಲಿ ಗಂಗಾದಿ ಸಕಲ ತಿರ್ಥಗಳು ಸನ್ನಿಹಿತವಾಗಿರುತ್ತವೆ. ಇನ್ನು ಮುಂದೆ ಈ ಸರೋವರವು " ವರುಣ ತೀರ್ಥವೆಂದು ಪ್ರಸಿದ್ದವಾಗಲಿ " ಎಂದು ಹರಸಿ ಅಂತರ್ಧಾನ ಹೊಂದಿದನು.
ಇದೇ ರೀತಿ ಕುಂಭಮುಖಿಯ ತಪಸ್ಸಿಗೂ ಮೇಚ್ಚಿದ ಅಮೃತೇಶ್ವರೀಯು ಪ್ರತ್ಯಕ್ಷಳಾಗಿ ಕುಂಭಮುಖಿಯಲ್ಲಿ " ಬೇಕಾದ ವರಗಳನ್ನು ಕೇಳು " ಎನ್ನಲು ದೇವಿಯ ದಿವ್ಯಸ್ವರೂಪದರ್ಶನದಿಂದ ಉಂಟಾದ ಸಂತೋಷಾತಿಶಯದಿಂದಲೂ ಋಷಿ ಪತ್ನಿಯ ಶಾಪ ಪ್ರಭಾವದಿಂದಲೂ ಭ್ರಾಂತಳಾಗಿದ್ದ ಕುಂಭಮುಖಿಯು ದೇವಿಯಲ್ಲಿ " ತಾಯೇ ನೀನು ನಿತ್ಯ ಯೌವನೆಯಾಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ " ಎಂದು ಬೇಡಿದಳು.
ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಕುಂಭಮುಖಿಯಲ್ಲಿ " ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯವಿಲ್ಲದ ಕಾರಣದಿಂದಲೇ " ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು " ಎಂದು ಕೇಳುವ ಬದಲು " ನೀನು ಮಕ್ಕಳನ್ನು ಪಡೆ " ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ... ಇನ್ನು ಕೆಲವೇ ಸಮಯದ ನಂತರ ಇಲ್ಲಿಗೆ ಆಗಮಿಸುವ ಶ್ರೀ ರಾಮಚಂದ್ರನಿಂದ ನಿನ್ನ ಪತಿಯಾದ ಖರಾಸುರನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ನೀನು ಕೂಡಾ ಅನಾಯಾಸವಾಗಿ ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಲದಲ್ಲಿ ಶಿವಲಿಂಗ ಸದ್ರಶ್ಯವಾದ ಲಿಂಗಗಳು ಆಗಾಗ ಉತ್ಪತ್ತಿಯಾಗಿತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು " ಹಲವು ಮಕ್ಕಳ ತಾಯಿ " ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ " ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದಳು.
ಕೆಲವು ಕಾಲಗಳ ನಂತರ ಸೀತಾ ಸಹಿತನಾದ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನಿಗೂ ಶ್ರೀ ರಾಮನಿಗೂ ಯುದ್ಧವಾಯಿತು. ಶಿವನ ವರಪ್ರಸಾದದಿಂದ ಶ್ರೀ ರಾಮನೇ ಮಹಾವಿಷ್ಣುವಿನ ಅವತಾರವೆಂದು ತಿಳಿದು ಖರಾಸುರನು ಯುದ್ಧ ಮಾಡಿ ಮುಕ್ತಿಯನ್ನು ಹೊಂದಿದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯನ್ನು " ಹಲವು ಮಕ್ಕಳ ತಾಯಿ " ಎಂದು ಕರೆಯಲಾರಂಭಿಸಿದರು. ಈಗ ಈ ಹೆಸರೇ ಪ್ರಸಿದ್ಧವಾಗಿದೆ.

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ .


ಅತ್ಯಂತ ಪ್ರಾಚೀನವಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಲ್ಲೆಯ ಕಾರಣೀಕ ಶಕ್ತಿ ಕೇಂದ್ರಗಳಲ್ಲಿ ಒಂದು. ಈ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ.

ಸೌಕ್ಯ ಮುನಿಗಳು ಈ ಸ್ಥಳದಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದರು. ಅವರ ಹೆಸರಿನಿಂದಲೆ ಈ ಊರಿಗೆ ಸೌಕ್ಯಪುರ-ಸೌಕೂರು ಎಂದು ಹೆಸರಾಯಿತು. ದುರ್ಗಾಸುರನನ್ನು ಪರಾಶಕ್ತಿ ಕೊಂದು ಈ ಸ್ಥಳದಲ್ಲಿ ದೇವಿಯು ದುರ್ಗಾಪರಮೇಶ್ವರಿ ಅಮ್ಮನವರಾಗಿ ನೆಲೆಯಾದರು. ಈ ಮಹಾತಾಯಿಯ ಪವಾಡ ಅಪಾರವಾದದು. ಈ ತಾಯಿಯು ಕಮಲೆಶಿಲೆಯ ಬ್ರಾಹ್ಮೀ ದುರ್ಗೆಯ ಅಕ್ಕನೆಂದು ಜನರು ನಂಬುತ್ತಾರೆ. ಹಾಗೇ ಇವಳು ಹಿರಿಯವಳು, ಬ್ರಾಹ್ಮೀ ಕಿರಿಯವಳು ಎಂದು ಜನಜನಿತವಾದ ನಾಣ್ಣುಡಿಯೊಂದಿಗೆ ಬೆರೆತ ಐತಿಹ್ಯವಾಗಿದೆ. ಈ ದೇವಿಯು ಲಕ್ಷ್ಮೀ, ಕಾಳಿ ಮತ್ತು ಸರಸ್ವತಿಯ ಮೂರು ರೂಪವೊಂದಾಗಿ ತ್ರಿಶಕ್ತಿ ದೇವತೆಯಾಗಿ ತ್ರೈಲೋಕಪಾಲಕಿಯಾಗಿದ್ದಾಳೆ. ಇವಳ ಶಕ್ತಿ ಅಪಾರಾದುದು. ಮಹಿಮೆ ಕೇಳಿದರೆ ಜನುಮವೇ ಪಾವನಮಯವಾಗುತ್ತದೆ. ಇವಳು ಪುಪ್ಷಪವಾಡ ಖ್ಯಾತಿಯ ದೇವತೆಯೆಂದರೆ ಮಧುವೆ ಸಂಬಂದಗಳನ್ನು ಈ ತಾಯಿಯ ಮುಡಿಯಮೇಲೆ ಇಟ್ಟು ಎಡ-ಬಲ ಕಡೆಯಿಂದ ಪ್ರಸಾದ ರೂಪದಲ್ಲಿ ಪುಷ್ಪ ಜಾರಿದರೆ ಶುಭ ಹಾಗೂ ಮುಂದುವರಿಸಬೇಕೆಂದು ಇಲ್ಲವಾದಲ್ಲಿ ಬೇಡವೆಂದು ತಿಳಿಯುವ ಮೂಲಕ ಮಧುವೆಯ ಸಂಬಂದ ಮುಂದುವರೆಸುತ್ತಾರೆ.
ಸೌಕೂರು ದೇವಸ್ಥಾನದ ಗರ್ಭಗುಡಿಯಲ್ಲಿ ಏಕಪೀಠದ ಮೇಲೆ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅವು ದುರ್ಗಾದೇವಿಯ ಮಹಾಕಾಳಿ ಸ್ವರೂಪಿ, ಮಹಾಲಕ್ಷ್ಮಿ ಮಹಾಸರಸ್ವತಿಯ ಪ್ರತೀಕಗಳಾಗಿವೆ. ಶ್ರೀದುರ್ಗಾಪರಮೇಶ್ವರಿ ಎಂದು ಕರೆಯುವ ಪಂಚಲೋಹದ ಅಲಂಕಾರ ಮೂರ್ತಿಯನ್ನು ಲಿಂಗಗಳ ಹಿಂಬದಿಯಲ್ಲಿ ಸ್ಥಾಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗ ಸ್ವರೂಪಿಯಾಗಿ ತ್ರಿಶಕ್ತಿ ಆವಿರ್ಭವಿಸಿರುವ ಶ್ರೀದುರ್ಗಾಪರಮೇಶ್ವರಿ ಅಮ್ಮನವರೆಂದು ಆರಾಧಿಸುತ್ತಾರೆ.
ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತಾದಿಗಳ ಪ್ರಶ್ನೆ, ಪ್ರಸಾದ, ನೆಂಟಸ್ತಿಕೆಗಳ ಬಗ್ಗೆ ಹೂವಿನ ಪ್ರಸಾದ ನೋಡುವ ಖ್ಯಾತಿಯ ಕ್ಷೇತ್ರವಾಗಿದೆ. ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಿ ಮದುವೆಯ ಯೋಗ ಕೂಡಿಸುವ ಮಹಾತಾಯಿ ಎಂಬ ನಂಬಿಕೆ ಇದೆ. ದೇವಿಗೆ ಸಿಂಗಾರ ಗೊನೆ ಏರಿಸಿ ಅದರ ಮೇಲೆ ಹೂಗಳನ್ನಿಡುತ್ತಾರೆ. ಭಕ್ತರು ತಮ್ಮ ಕಾರ್ಯವನ್ನು ಉದ್ದೇಶಿಸಿ ಪ್ರಾರ್ಥಿಸಿಕೊಂಡು ದೇವಿಯ ಸನ್ನಿಧಿಯ ಪ್ರಸಾದವನ್ನು ಕೋರುತ್ತಾರೆ. ದೇವಿಯ ಮುಡಿಯಿಂದ ಹೂವಿನ ಪ್ರಸಾದವಾದಾಗ ಭಕ್ತಾಧಿಗಳು ಧನ್ಯತೆಯಿಂದ ನಮಸ್ಕರಿಸುತ್ತಾರೆ. ಪ್ರಸಾದದ ಪುಷ್ಪಗಳು ದೇವಿಯ ಮುಡಿಯಿಂದ ಎಡ ಬಲಗಳೆನ್ನದೆ ಎತ್ತ ಕಡೆ ಬಿದ್ದರೂ ಸಮ ಕಾರ್ಯ ಜಯ ಎಂದು ಭಕ್ತರು ಭಾವಿಸುತ್ತಾರೆ. ಪುಷ್ಪ ಬೀಳದೆ ಇದ್ದರೆ ಆ ಕಾರ್ಯದ ಬಗ್ಗೆ ಪರಾಮಶರ್ಿಸಲು ಕಾರ್ಯ ಮುಂದೂಡುತ್ತಾರೆ.
ದೇವಸ್ಥಾನದಲ್ಲಿ ಪರಿವಾರ ದೇವತೆಗಳಾಗಿ ಈಶ್ವರ, ಗಣಪತಿ, ವೀರಭದ್ರ, ಹುಲಿದೇವರುಗಳಿದ್ದಾರೆ. ಶಿರದಿಂದ ಎದೆಯ ಭಾಗದ ವರೆಗೆ ಮಾತ್ರ ಇರುವ ವೀರಭದ್ರ ದೇವರ ಅಪರೂಪದ ಶಿಲಾಮೂರ್ತಿಯೊಂದು ಇಲ್ಲಿದೆ. ವರ್ಣಮಯವಾದ ಬಾಗಿಲು ಬೊಬ್ಬರ್ಯ ಇಲ್ಲಿದ್ದಾನೆ. ವಿಶೇಷ ಪರ್ವಗಳಲ್ಲಿ ಬಾರಿಸುವ ಪುರಾತನ ಕಾಲದ ದೊಡ್ಡದೊಂದು ಗಂಟೆ ಇಲ್ಲಿದೆ.
ದೇವಾಲಯದ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ. ದೇವಸ್ಥಾನದ ಗೋಪುರ, ಶಿಖರ ಶಿಲ್ಪಕಲೆಯ ವೈಭವ ನೋಡುವಂತಹದ್ದಾಗಿದೆ. ಇಲ್ಲಿ ಅತೀ ಎತ್ತರದ ಧ್ವಜಸ್ತಂಭವಿದೆ. ಸೌಕೂರು, ಕಮಶಿಲೆ, ಕೊಲ್ಲೂರು ಅಮ್ಮನವರ ದೇವಸ್ಥಾನಗಳಲ್ಲಿ ಪರಸ್ಪರ ಸಾಮ್ಯಗಳಿದ್ದು. ಜನ ಅಕ್ಕತಂಗಿಯರ ದೇವಸ್ಥಾನ ಎಂದು ಭಕ್ತಿಯಿಂದ ಹೇಳುತ್ತಾರೆ.
ಈ ಕ್ಷೇತ್ರದ ಒಳ ಪೌಳಿಯಲ್ಲಿ ಸುಮಾರು ಹತ್ತನೆ ಶತಮಾನಕ್ಕೆ ಸಲ್ಲುವ ಶಿಲಾಶಾಸನಗಳಿವೆ. ಒಳ ಸುತ್ತಿನ ಹೆಬ್ಬಾಗಿಲಿನ ಮಾಡಿಗೆ ತಾಮ್ರದ ಹೊದಿಕೆ ಇದೆ.
ಸೌಕೂರು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸುಂದರವಾದ ಚತುರ್ಭುಜ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಇದೆ. ಇಷ್ಟೊಂದು ಪ್ರಖ್ಯಾತವಾದ ಈ ಪ್ರಾಚೀನ ದೇವಸ್ಥಾನ ಇತ್ತೀಚೆಗೆ ಗರ್ಭಗುಡಿ ಹೊರತು ಪಡಿಸಿ ಸಂಪೂರ್ಣ ನವೀಕರಣವಾಗಿದೆ.
ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಸಮೀಪದ ಎತ್ತರದ ಸ್ಥಳದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಸೌಕೂರು ಅಮ್ಮನವರ ಕ್ಷೇತ್ರದ ಪರಿಸರದಲ್ಲಿ ಜಾನುವಾರು ಕಳೆದು ಹೋದರೆ ಹುಲಿದೇವರಿಗೆ ವಿವಿಧ ರೀತಿಯ ಹರಕೆ ಸಲ್ಲಿಸುವ ಪದ್ಧತಿ ಇಲ್ಲಿದೆ.
ದೇವಸ್ಥಾನದ ಪೂರ್ವದಿಕ್ಕಿನಲ್ಲಿ ಅಶ್ವತ್ಥಕಟ್ಟೆ ಇದೆ. ಉತ್ತರ ದಿಕ್ಕಿನಲ್ಲಿ ನಾಗ ಸಾನ್ನಿಧ್ಯವಿದೆ. ನಾಗ ಸಾನ್ನಿಧ್ಯದ ಕೆಳಗೆ ಸ್ವಲ್ಪ ದೂರದ ಜಾಗದಲ್ಲಿ ಮೇಲುಗಡೆ ಸೀಳಿದ ಶಿಲೆಕಲ್ಲು ಇದೆ. ಇದನ್ನು ಶ್ರೀದೇವರ ಮೂಲಸ್ಥಾನ ಎಂದು ಭಾವಿಸಿ, ಉತ್ಸವದ ದಿನಗಳಲ್ಲಿ ಇಲ್ಲಿಯೂ ಪೂಜೆ ಸಲ್ಲಿಸುವ ಪದ್ಧತಿ ಇದೆ.
ಸೌಕೂರು, ಗುಲ್ವಾಡಿ ಗ್ರಾಮದ ಕೂಡುಗ್ರಾಮವಾಗಿದ್ದು ಪುರಾತನ ಗುಲ್ವಾಡಿ ಕೋಟೆಯ ಅವಶೇಷಗಳ ಜಾಗದಿಂದ ಸ್ವಲ್ಪವೆ ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.
1782 ಮೈಸೂರು ಅರಸರ ಸೇನೆಯ ಬಸ್ರೂರು ದಾಳಿಯ ನಂತರ ಗುಲ್ವಾಡಿ ನಿರ್ಜನವಾಯಿತು. ಕೋಟೆಯ ಒಳಗಿದ್ದ ಗೋಪಾಲಕೃಷ್ಣ ದೇವಸ್ಥಾನ ಎರಡಂಕಣದ ಕಟ್ಟಡವಿದ್ದರೂ-ದೇವರ ಮೂರ್ತಿ ಮಾತ್ರ ಇಲ್ಲವಾಗಿದೆ.
ಗುಲ್ವಾಡಿ ಕೋಟೆಯ ಸ್ಥಳದ ಸಮೀಪ ಇರುವ ಆಂಜನೇಯ ದೇವಸ್ಥಾನದಲ್ಲಿ ಸಾಧಾರಣ ಎರಡೂವರೆ ಅಡಿ ಎತ್ತರದ ಶಿಲಾಪ್ರತಿಮೆ ಇದೆ.
ಸೌಕೂರು ದೇವಸ್ಥಾನದ ಇತಿಹಾಸದಲ್ಲಿ ಇದನ್ನು ತಾತಯ್ಯನ ಮಠ ಎಂದು ಗುರುತಿಸಲಾಗಿದೆ. ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಿಯ ಆರಾಧಕರಾಗಿ-ಗುಲ್ವಾಡಿ ಕೋಟೆಯಲ್ಲಿದ್ದ ರಾಮಕ್ಷತ್ರಿಯ ಸೇನೆಯ ದಂಡಿಗೆಗಳ ಯೋಧರು-ಕೋಟೆಯ ಪತನದ ನಂತರ ಕುಟುಂಬ ಸಹಿತ ಕುಂದಾಪುರಕ್ಕೆ ವಲಸೆ ಹೋದರು ಎಂದು ತಿಳಿಯುತ್ತದೆ. ಇದೇ ಕಾಲದಲ್ಲಿ ಉಪ್ಪುಂದ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಮಾರ್ಗದಲ್ಲಿದ್ದ ಖಂಭದಕೋಣೆ, ಕೆರ್ಗಾಲು ಬಳಿಯ ಹಳಗೇರಿ ಸೇನಾ ಪಾಳೆಯ ಮತ್ತು ಹೊಸಕೋಟೆಗಳು ಶತ್ರುಗಳ ಹಿಂಸೆಗೆ ತುತ್ತಾಗಿ ಜರ್ಜರಿತವಾಯಿತು.
ಹಳಗೇರಿಯ ನದಿ ಮುಖಜ ಭೂಮಿಯಲ್ಲಿರುವ ಅತ್ಯಂತ ಪುರಾತನವಾದ ಶಿಲಾಮಯ ಕುಕ್ಕೇಶ್ವರ ದೇವಸ್ಥಾನದ ಇತಿಹಾಸದಲ್ಲಿ ಇದನ್ನು ಉಲ್ಲೇಖಿಸಿ, ಹಳಗೇರಿ ಸೇನಾ ಬೀಡು ಖಾಲಿಯಾದ ಪ್ರಸಂಗವನ್ನು ಪ್ರಸ್ತಾಪಿಸಲಾಗಿದೆ.
ಕನ್ನಡ ಕರಾವಳಿಯ ಪ್ರದೇಶ ಪುಣ್ಯ ಕ್ಷೇತ್ರಗಳ ಬೀಡು, ವಿಜಯನಗರ ಸಾಮ್ರಾಜ್ಯದ ನಂತರ ಕೆಳದಿಯರಸರ ಆಳ್ವಿಕೆಯ ಕಾಲದಲ್ಲಿ ರಾಜಾಶ್ರಯದೊಡನೆ ಶಿಲ್ಪ ಕಲಾ ವೈಭವದಿಂದ ಮೆರೆದ ಹಲವು ದೇವಸ್ಥಾನಗಳು ಇಲ್ಲಿವೆ.
ಶ್ರೀರಂಗ ಪಟ್ಟಣದ ಯುದ್ಧದ ನಂತರ ಕನ್ನಡ ಕರಾವಳಿ ಇಂಗ್ಲಿಷರ ಆಡಳಿತಕ್ಕೊಳಪ್ಪಟ್ಟಿತು. ಕೆನರಾ ಜಿಲ್ಲೆಯ ಪ್ರಥಮ ಕಲೆಕ್ಟರ್ ಲೋರ್ಡ್ ಮುನ್ರೋ ಕಾಲದಲ್ಲಿಯೆ ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸರ್ಕಾರ ಮನ್ನಣೆ ನೀಡಿ ವಾರ್ಷಿಕ ತಸ್ತೀಕು ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿಯುತ್ತದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇನ್ನೂರು ವರ್ಷಗಳಿಂದ ಕಲಾ ಸೇವೆ ಮಾಡುತ್ತ ದೇವಿಯ ನೆನಪನ್ನು ಸದಾ ಮಾಡುತ್ತಿದೆ. ಮಹಾದೇವಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಅನಂತ ನಮನಗಳು. ಇವಳ ಮಹಿಮೆಯನ್ನೊಮ್ಮೆ ತಿಳಿಯಲು ಶ್ರೀ ದೇವಿಯನ್ನು ಒಮ್ಮೆ ಕಣ್ತುಂಬ ನೋಡಿ ಕೃತಾರ್ಥಗಾಗಿ. ಭಗವತಿ ದುರ್ಗೆಯ ಪಾದಾರವಿಂದಗಳಿಗೆ ಎರಗಿ ಅಮ್ಮನ ಕೃಪಾರ್ಶೀವಾದವನ್ನು ಪಡೆಯಿರಿ.
ದಾರಿಯ ವಿವರ : ಶ್ರೀ ದೇವಿಯ ದೇವಾಲಯವನ್ನು ಸಂದರ್ಶಿಸಲು ಕೊಲ್ಲೂರು ಮೂಕಾಂಬಿಕಾ ಅಮ್ಮನವರು ಮತ್ತು ಬ್ರಾಹ್ಮೀ ದುರ್ಗೆಯನ್ನು ನೋಡಿ ಅದೇ ಮಾರ್ಗವಾಗಿ ನೇರಳಕಟ್ಟೆಯಿಂದ ಶ್ರೀ ಸೌಕೂರು ದೇವಿಯ ಸಾನಿಧ್ಯವನ್ನು ಕಾಣಬಹುದು. ಕುಂದಾಪುರದಿಂದ ತಲ್ಲೂರು ನೇರಳಕಟ್ಟೆ ಮಾರ್ಗದಲ್ಲಿ ಸಾಗಿದಾಗ ಗುಲ್ವಾಡಿ ಸಮೀಪದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭವ್ಯ ಗೋಪುರ ಗೋಚಾರವಾಗುತ್ತದೆ. ದೇವಿಯನ್ನೊಮ್ಮೆ ಕಣ್ಣಾರೆ ನೋಡಿ ನಿಮ್ಮ ಜೀವನ ಪಾವನವಾಗಿಸಿಕೊಳ್ಳಿ.
ವಿಳಾಸ : - ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ,
ಸೌಕೂರು, ಕುಂದಾಪುರ ತಾಲೂಕು.
ಉಡುಪಿ- ಜಿಲ್ಲೆ.


ಹಿಂದಿ ಮಾಷ್ಟ್ರೆ ನಂಗೆ ಸ್ಫೂರ್ತಿ !


ಯಾವುದೇ ಒಂದು ಯಶಸ್ಸಿನ ಹಿಂದೆ ಪ್ರೋತ್ಸಾಹದ ಪ್ರಭಾವ ಇದ್ದೆ ಇರುತ್ತದೆ ಒಂದು ಕಾರ್ಯದ ಸುಕ್ಸಸ್ ಗೆ  ಗುರಿ ಮತ್ತು ಗುರಿಯೇ ಮುಖ್ಯ ಎನ್ನುವುದು ಬಲ್ಲವರ ಅಭಿಪ್ರಾಯ .ನಿಜಕ್ಕೂ ಈ ಮಾತು ವಾಸ್ತವದ ವಿಚಾರವೂ ಹೌದು .ಬಹುಶ: ನನ್ನಸಾಹಿತ್ಯ ಪ್ರೇಮಕ್ಕೆ ಈ ಅಕ್ಷರ ಬಯಕೆಯ ಬರವಣಿಗೆಗೆ ಸ್ಫೂರ್ತಿ ಎಂದರೆ ನಮ್ಮ ಹಿಂದಿ ಮಾಷ್ಟ್ರ್ ಅಂತಲೇ ಹೇಳಬಹುದು .ಅವರ ಹೆಸರು ಬಸವರಾಜ್  ಎಂದಿದ್ದರೂ ,ಈಡೀ ನಮ್ಮ ಸಂಸ್ಥೆಗೆ ಅವರೇ ಹಿಂದಿ ವಿಷಯದ ಉಪನ್ಯಾಸಕರಾಗಿದ್ದರಿಂದ ಎಲ್ಲೆಲ್ಲೂ ಹಿಂದಿ ಮಾಷ್ಟ್ರ್ ಎಂದೇ ಜನ ಜನಿತ .ಆಗ ನಮಗೆ 9 ನೇ ತರಗತಿ . ನಮ್ಮ ಕ್ಲಾಸ್ ಟೇಚರ್ ಕೂಡ ಇವರೇ ಆಗಿದ್ದರು .ಉತ್ತಮ ವಾಗ್ಮಿ ,ಹಿತ ಮಿತ ,ಎಲ್ಲರಿಗೂ ಆರ್ಥವಾಗುವ ಮುತ್ತಿನ,ಮಾಣಿಕ್ಯದಂಥ ಮಾತು .ಹಸನ್ಮುಖಿ ಮುಖಭಾವ .
ಶಿವಕುಮಾರ್ ಹೊಸಂಗಡಿ
 ಪಠ್ಯತ್ತರ ಜೊತೆ ಆಟೋಟ ,ಸಾಂಸ್ಕ್ರತಿಕ  ಕಾರ್ಯಕ್ರಮ ಎಲ್ಲವೂ, ಎಲ್ಲಾ ವಿಧ್ಯಾಸಂಸ್ಥೆಗಳಲ್ಲಿ ಇದೆಯೋ ಇಲ್ವೋ ಗೊತ್ತಿಲ್ಲ  ಆದರೆ ನಮ್ಮ ಪ್ರೌಢ ಶಾಲೆಯಲ್ಲಿ ಇದು ಬಹಳ ಕಟ್ಟು ನಿಟ್ಟಾಗಿ ಪಾಲಿಸುತ್ತಾ ಬಂದಿತ್ತು .ಹಾಗಾಗಿಯೋ ಏನೋ ಪ್ರತಿ ವರ್ಷ ಕ್ರೀಡಾ ಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರೇ, ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ' ಪ್ರತಿಭಾ ಕಾರಂಜಿ' ಕಾರ್ಯಕ್ರಮದ ಮೂಲಕ  ಗುರುತಿಸಿ ಕೊಂಡಿದೆ . ಅದೇನೇ ಇರಲಿ  ಕ್ರೀಡಾ ಕೂಟದಲ್ಲಿ ನಾನು ಬಹಳಷ್ಟು ಹಿಂದೆ ..ಸಾಂಸ್ಕ್ರತಿಕ ಚಟುವಟಿಕೆ ಗಂತೂ ಇಲ್ಲವೇ  ಇಲ್ಲ !.ವಿಧ್ಯಾಭ್ಯಾಸದ ಬಗ್ಗೆ 6 ಕ್ಕೆ ಇರಲಿಲ್ಲ ..3ರಕ್ಕೆ ಇಳಿಯಲಿಲ್ಲ  ಇಂಥಹ ದೈನಂದಿನ ಚಟುವಟಿಕೆಯಲ್ಲಿ ನನ್ನ ಶಾಲಾ ಜೀವನ ಸಾಗುತಿತ್ತು .ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಲೇ ಬೇಕೆಂಬ ಕಟ್ಟಪ್ಪಣೆ  ನಮ್ಮ ದೈಹಿಕ ಶಿಕ್ಷಕರಲ್ಲಿ  ಇರಲಿಲ್ಲ .ಇದರಲ್ಲಿ ಇಂಟ್ರೆಷ್ಟ್ ಇದ್ದವರಿಗೆ ,ಅಂತಹ ಪ್ರತಿಭೆಗಳಿಗೆ ತರಭೇತಿ ನೀಡುವಲ್ಲಿ ಸಕ್ರಿಯರಾಗುತ್ತಿದ್ದರು .ಆದರೆ ವಾರಕ್ಕೆ ಒಮ್ಮೆ ಶುಕ್ರವಾರ ಮಧ್ಯಾಹ್ನದ ಕೊನೆ ಪಿರಿಡ್ C .A (Cultural Activities ) ಎಂದಾಗಿತ್ತು .ಈ ಸಾಂಸ್ಕ್ರತಿಕ ಕಾರ್ಯಕ್ರಮದ ಪಿರಿಡ್ ನ ದಿನ ಖಡಾ ಖಂಡಿತವಾಗಿ ಎಲ್ಲಾ ವಿಧ್ಯಾರ್ಥಿಗಳು ಭಾಗವಹಿಸಲೇ ಬೇಕಿತ್ತು .ಈ ಕಾನೂನು ಉಳಿದ ಎಲ್ಲಾ ತರಗತಿಗಳಿಗೂ ಇಲ್ಲದೆ ಇದ್ದರೂ ನಮ್ಮ ಕ್ಲಾಸ್  ಅವಶ್ಯವಾಗಿ ಪಾಲಿಸಲೇ ಬೇಕಿತ್ತು .ಇದು ನಮ್ಮ ಕ್ಲಾಸ್ ಟೇಚರ್ ಆದ ಹಿಂದಿ ಮಾಷ್ಟ್ರ್ ರರ  ಕಟ್ಟಾಜ್ಞೆ !  ಆ ಒಂದು ಸಂದಿಗ್ನ ಪರಿಸ್ತಿತಿಗೆ ನಾನು ಸಾಹಿತ್ಯದ ಮೊರೆ ಹೋಗಲೇ ಬೇಕಾಯಿತು .ಲೇಖನಿಯನ್ನು ಆ ವಿಷಯಕ್ಕೂ ಪ್ರಹರಿಸಬೇಕಾದ ಪ್ರಸಂಗ ,ಬಯಸದೆ ಬಂದ ಬಾಗ್ಯವಾಯಿತು .ಮನಸಿಗೆ ಬಂದ ಪುಟ್ಟ -ಪುಟ್ಟ ನಗೆ ಹನಿಯನ್ನು ಬರೆದು ಪ್ರಹಸ ಮಾಡವುದು ಕಲಿತು ಕೊಂಡೆ .ಆ ದಿನದ ಆ ಪೀರಿಡ್ ನಲ್ಲಿ ಸಾಂಸ್ಕ್ರತಿಕ ವಿಚಾರಕ್ಕೆ ಸಂಬಂದಿಸಿದ ವಿಚಾರಗಳ ಬಗ್ಗೆ ಚರ್ಚೆ ,ಪ್ರಶ್ನೆ ,ಸಂದರ್ಶನ ,ಬೋಧನೆ ನಮ್ಮ ಹಿಂದಿ ಮಾಷ್ಟ್ರ್ ಇಂದ ನಡೆಯಲ್ಪಡುತ್ತಿತ್ತು.ಒಂದು ದಿನ ''  'ಚುಟುಕುಗಳ ಬ್ರಹ್ಮ' ಕವಿ  ದಿನಕರ್ ದೇಸಾಯಿ ಬರಹ ಹೋಲುವಂತ  ಕವನಗಳನ್ನು  ಎಲ್ಲರೂ ಬರೆದು ಪ್ರಸ್ತಾವಿಸಬೇಕು ಮುಂದಿನ ca ಪೀರಿಡ್ ಗೆ'' .ಎಂಬ ಕಟ್ಟಾಜ್ಞೆ ಗೆ ನಾನು 6 ಕವಿತೆಯನ್ನು ಬರೆದು ವಾಚಿಸಿದ್ದೂ , ಹಿಂದಿ ಮಾಷ್ಟ್ರ್ ಪ್ರಶಾಮ್ಸಿದ್ದೂ, ಇನ್ನಷ್ಟು ಬರೆಯಲು ಇಂಬು ನೀಡಿದ್ದೂ ,ಸಹಪಾಠಿಗಳು ಸಹಕರಿಸಿದ್ದು ಎಲ್ಲವೂ ಇತಿಹಾಸವಾದರೂ ನನ್ನ ಮುಂದಿನ ಕೆಲ ಪುರಸೋತ್ತಿನ ಬರಹಕ್ಕೆ ಸಾಕ್ಷಿಯಾಗಿತ್ತು . ಹೀಗೆ ಬರವಣಿಗೆಯೇ ಹವ್ಯಾಸ ಹಬ್ಬಿ ಕೊಂಡಿತ್ತು .ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವಾರಕ್ಕೊಂದು ವಿಷಯಕ್ಕೆ ನಿಮ್ಮ ಅಭಿಪ್ರಾಯದ ಟಿಪ್ಪಣಿಯನ್ನು ಬರೆದು ಕಳಿಸಿ ಎಂದು ಬೆನ್ನು ತಟ್ಟಿ ಎಚ್ಚರಿಸಿ ಉಪಚರಿಸುತ್ತಿದ್ದ ಸರ್ ರ ಮಾತಿಗೆ ಬೆಲೆ ಕೊಟ್ಟು ,ಪಠ್ಯದ ಜೊತೆ ಇದನ್ನು ಅಳವಡಿಸಿ ನಿರಂತರ ಸಾಹಿತ್ಯ ಪ್ರೇಮಕ್ಕೆ ದಾಸನಾದೆ .ಇದು ಸಾಧ್ಯವಾಗಿದ್ದು ನಿಜಕ್ಕೂ ಪ್ರೀತಿಯ ಹಿಂದಿ ಮಾಷ್ಟ್ರ್ ಯಿಂದಲೇ ಅನ್ನಲಿಕ್ಕೆ ಹೆಮ್ಮೆ ಅನ್ನಿಸುತ್ತದೆ .ಪ್ರತಿಯೊಬ್ಬರ ಮನದಲ್ಲಿ ಅವಿತಿರುವ ಪ್ರತಿಭಾ ಭೂತವನ್ನು ಹೊರಕ್ಕೆ ಎಬ್ಬಿಸುವ ಇವರ ಈ ಸಾಹಿತ್ಯ ಶ್ರಮದಾಯಕ ಸಾಹಸದಿಂದ ಅದೆಷ್ಟೋ ವಿಧ್ಯಾರ್ಥಿಗಳು ಲೇಖಕರಾಗಿ ಹೊರ ಹೊಮ್ಮಿದ್ದಾರೆ . ಇವರರನ್ನು ಮಿಸ್ ಮಾಡಿಕೊಳ್ಳುತ್ತದ್ದರೂ ,ಬರೆಯುವ ಅಕ್ಷರದಲ್ಲಿ ನೆರಳಾಗುತ್ತಾರೆ . ಇದೀಗ ಒಂದೆಡೆ ಓದು ಇನ್ನೊಂದೆಡೆ ಉದ್ಯೋಗದಲ್ಲಿ ಬ್ಯುಸಿಯಾಗಿರುವ ನನಗೆ ಸಮಯವನ್ನು ಸರಿದೂಗಿಸಿಕೊಂಡು ಕೆಲ ಪತ್ರಿಕೆ ಗಳಲ್ಲಿ ಅಭಿವ್ಯಕ್ತಿಯನ್ನು ಹಂಚಿ ಕೊಳ್ಳುದರ ಜೊತೆಗೆ ಬ್ಲಾಗ್ ನಲ್ಲಿ ಬರೆಯುವ ಹವ್ಯಾಸ ತೆರೆ ಮರೆಯಲ್ಲಿ ನಡೆಯುತ್ತಿದೆ .ಬರೆಯುವ ಮನಸಿದ್ದರೂ ,ಸಮಯದ ಒತ್ತಡ ಹೆಗಲೇರಿ ಕುಳಿತಿದೆ .
-ಶಿವಕುಮಾರ್ ಹೊಸಂಗಡಿ


Wednesday, 26 February 2014

ನಮ್ಮ ಕುಂದಾಪುರ,



ಕುಂದಾಪುರ ತಾಲೂಕಿನ ಪ್ರಮುಖ ಪಟ್ಟಣವಾಗಿದೆ.ಇದು ಜಿಲ್ಲಾಕೇಂದ್ರವಾದ ಉಡುಪಿಯಿಂದ 35 ಕಿಲೋಮೀಟರ್ದೂರದಲ್ಲಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರಕಿನಾರೆಯು ಕುಂದಾಪುರ ತಾಲೂಕಿನ ಪ್ರಮುಖಆಕರ್ಷಣೆಗಳಲ್ಲೊಂದು. ಈ ತಾಲೂಕಿನ ಗಂಗೊಳ್ಳಿಯಲ್ಲಿರುವಸೇತುವೆಯು ಉಡುಪಿಜಿಲ್ಲೆಯಲ್ಲೇ ಅತೀ ದೊಡ್ಡದು.ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದಪಾತ್ರ ಬಹಳ ಪ್ರಮುಖ. ಕುಂದಾಪುರದಮತ್ತೊಂದು ವಿಶೇಷವೆಂದರೆ, ಇದೊಂದು ಪರ್ಯಾಯ ದ್ವೀಪದರೂಪದಲ್ಲಿದೆ - ಉತ್ತರ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿನೀರಿದೆ - (ಸಮುದ್ರ, ಗಂಗೊಳ್ಳಿ ಹೊಳೆ ಮತ್ತು ಹಾಲಾಡಿ ಹೊಳೆಹಾಗೂ ಕೋಣಿ ಹಿನ್ನೀರು ಪ್ರದೇಶ) ಮತ್ತು ದಕ್ಷಿಣದಲ್ಲಿ ಮಾತ್ರನೆಲವಿರುವ ಊರು. ಇಂತಹ ಒಂದು ವೈಚಿತ್ರ್ಯದ ಪ್ರಚಾರವಾಗಿಲ್ಲಮತ್ತು ಈ ನೀರಿನ ಇರವನ್ನು ಪ್ರವಾಸೋದ್ಯಮಕ್ಕೂ ಬಳಸುವಪ್ರಯತ್ನ ಹೆಚ್ಚಾಗಿ ನಡೆದಿಲ್ಲವೆಂದೇ ಹೇಳಬೇಕು. ಕುಂದಾಪುರಸಂತೆಯು ಸುತ್ತಲಿನ ನೂರಾರು ಹಳ್ಳಿಗಳ ವ್ಯಾಪಾರಕ್ಕೆಮತ್ತು 'ಕೃಷಿ ಉತ್ಪನ್ನ ಮಾರಲು' ಅನುಕೂಲಮಾಡಿಕೊಡುತ್ತಿದೆ.ಕುಂದಾಪುರ :-ಈ ಊರಿನ ಹೆಸರು 'ಪಂಚಗಂಗಾವಳಿ ತೀರ'ದಲ್ಲಿ'ಕುಂದವರ್ಮ'ನೆಂಬ ರಾಜನು ಕಟ್ಟಿಸಿದ 'ಕುಂದೇಶ್ವರ ದೇವಸ್ಥಾನ'ಮತ್ತು ಪಟ್ಟಣದಿಂದ ಬಂದಿದೆಯೆಂದು ಪ್ರತೀತಿ. ಕುಂದವರ್ಮಆಳಿದ್ದರಿಂದ, ಈ ಜಾಗವು ರಾಜನ ಹೆಸರನ್ನು ಹೊಂದಿರಬಹುದು.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ 'ಕೆಳದಿರಾಜ'ರ ಪ್ರಮುಖವಾರ ಬಂದರು ಹತ್ತಿರದ ಬಸ್ರೂರಿನಲ್ಲಿಮತ್ತು ಈ ಊರಿನಲ್ಲಿ ಇತ್ತು.ಪೋರ್ಚುಗೀಸರು 16ನೇ ಶತಮಾನದಲ್ಲಿ ಇಲ್ಲಿಗೆಬಂದು ನೆಲೆಸಿದರು ಹಾಗೂ ಒಂದು ಕೋಟೆಯನ್ನು ಕಟ್ಟಿದರು. ಆಗಸಮೀಪದ ಬಸರೂರು ಪ್ರಮುಖ ಪಟ್ಟಣವಾಗಿದ್ದು,ವ್ಯಾಪರದಂತಹಎಲ್ಲಾ ಚಟುವಟಿಕೆಗಳೂ ಬಸರೂರಿನಲ್ಲೇ ನಡೆಯುತ್ತಿತ್ತು. ನಂತರಕ್ರಮೇಣ ಬಸರೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು,ಕುಂದಾಪುರ ಅಭಿವೃದ್ದಿಗೆ ಬಂತು. 1799 ರಲ್ಲಿಟೀಪು ಸುಲ್ತಾನನ ಕಾಲನಂತರ ಈಪಟ್ಟಣವನ್ನು ಬ್ರಿಟೀಷರು ವಶಪಡಿಸಿಕೊಂಡರು. ಒಂದು ಕಾಲದಲ್ಲಿಈ ಊರಿನ ಹತ್ತಿರದ ಒಂದು ಸ್ವಚ್ಚ ನೀರಿನ ಕೆರೆಯಲ್ಲಿಟೀಪು ಸುಲ್ತಾನನಿಗೆಂದೇ ಒಂದು ವಿಶೇಷ ತಳಿಯಮೀನುಗಳನ್ನು ಸಾಕಲಾಗುತ್ತಿತ್ತು. ಈ ಊರಿನ ಸುತ್ತ ಮುತ್ತಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ)ಹೂವಿನಿಂದಾಗಿಯೂ ಬಂದಿದೆಯೆಂದು ಹೇಳುತ್ತಾರೆ.ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ
(ಕುಂದ) ಎಂಬ ಪದದಿಂದಲೂ ಬಂದಿದೆಯೆಂದು ಹೇಳುತ್ತಾರೆ.

Monday, 24 February 2014

ಕೋಟೇಶ್ವರ ಶ್ರೀ ಕ್ಷೇತ್ರ ಕೋಟೇಶ್ವರ ದೇವಸ್ಥಾನ ದ ಇತಿಹಾಸ



ಶ್ರೀ ಕೋಟಿಲಿಂಗೇಶ್ವರ ದೇವರು, ಕೋಟೇಶ್ವರ ಶ್ರೀ ಕ್ಷೇತ್ರ ಕೋಟೇಶ್ವರವು ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಸಪ್ತ ಪವಿತ್ರ ಸಪ್ತ ಕ್ಷೇತ್ರಗಳಲ್ಲಿ ಮುಖ್ಯವಾದುದಾಗಿದೆ. ಇಲ್ಲಿ ಶ್ರೀ ಕೋಟಿಲಿಂಗೇಶ್ವರನು ನೆಲೆಸಿ ಈ ತಾಣವು ಪರಮ ಪವಿತ್ರ` ಎನಿಸಿಕೊಂಡು ಇಂದು ಜಗತ್ತಿನಲ್ಲಿ ಮೆರೆಯುತ್ತಿದೆ.'ಕೋಟೇಶ್ವರ' ವು ಪರಾತನ ಕಾಲದಿಂದಲೂ ರಾಜ-ಮಹಾರಾಜರು ಆಳಿ-ಮೆರೆದ ನಾಡು. ಐತಿಹಾಸಿಕ ಸಾಂಸ್ಕೃತಿಕ ಮತ್ತು ಎಲ್ಲಾ ರೀತಿಯಿಂದಲೂ ಗುರುತಿಸಿಕೊಂಡಿರುವ 'ಕೋಟಿಲಿಂಗನ' ಬೀಡು, ಪುರಾತನ ಕಾಲದಲ್ಲಿ 'ಧ್ವಜಪುರ' ಎಂಬ ನಾಮದಿಂದ ಪ್ರಸಿಧ್ದಿಯನ್ನು ಹೊಂದಿದ ಪರಶಿವನು ನೆಲೆಸಿ ಪಾವನಗೊಳಿಸಿದ ಭವ್ಯ ತಾಣ. ಪರಶಿವನು ಇಲ್ಲಿ ನೆಲೆಸಿರುವ ಬಗ್ಗೆ ಕೆಲವಾರು ಗ್ರಂಥ ಉಲ್ಲೇಖಗಳೂ ಕೂಡಾ ಇವೆ. ಅನಾದಿ ಕಾಲದಲ್ಲಿ 'ಕೋಟಿ ಋಷಿಗಳು' ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪವನ್ನಾಚರಿಸಿ ಶ್ರೀ ಪರಶಿವನನ್ನು ಒಲಿಸಿಕೊಂಡಂತ ಪುಣ್ಯ ತಾಣ, 'ಕೋಟಿ ಋಷಿಗಳು' ತಪಗೈದ ಕಾರಣದಿಂದ ಈ ಪುಣ್ಯ ತಾಣದಲ್ಲಿ ಪರಶಿವನು 'ಕೋಟಿಲಿಂಗೇಶ್ವರ' ನಾಗಿ ನೆಲೆಯಾದನು ಎಂದು ಪ್ರತಿತಿ. ಪರಶಿವನು ಪಾರ್ವತಿ ಸಮೇತನಾಗಿ ಸಕಲ ದೇವಾನುದೇವತೆಗಳೊಡನೆ ನೆಲೆಸಿರುವ ಪರಮಪವಿತ್ರ ಪುಣ್ಯಸ್ಥಳವೇ ಈ ಪುಣ್ಯ ಭೂಮಿ 'ಕೋಟೇಶ್ವರ'. ಹೀಗೆ ಈ ಪುಣ್ಯಭೂಮಿಯ ಬಗ್ಗೆ ಇನ್ನೂ ಹಲವಾರು ಪ್ರತೀತಿಯೂ ಪ್ರಚಲಿತವಿದೆ. ಒಮ್ಮೆ ಸತ್ಯಯುಗದಲ್ಲಿ ಬ್ರಹ್ಮದೇವನ ತಪಸ್ಸಿಗೆ ಒಲೊದು ಮೈದೋರಿ ಈ ಭೂಮಿಯಲ್ಲಿ ನಿಂದನೆಂದು ಪ್ರತಿತಿ. ಹೀಗೆ ಬ್ರಹ್ಮದೇವ ತಪಸ್ಸನ್ನು ಆಚರಿಸಿದ ಸ್ಥಳ ದೇವಾಲಯದ ಎಡಭಾಗಕ್ಕೆ ಇರುವ ಬೃಹತ್ 'ಅಶ್ವತ್ಥ' ವೃಕ್ಷವೆಂದು ಪುರಾಣಗಳು ಸಾರುತ್ದೆ. ಅಂತೆ ಬ್ರಹ್ಮದೇವನ ಕಮಂಡಲದಿಂದ ಅಲ್ಲೇ ಪಕ್ಕದಲ್ಲೆ ಕೋಟಿ ಪುಣ್ಯವನ್ನು ನೀಡುವ 'ಕೋಟಿ ತೀರ್ಥ' ಪುಷ್ಕರಣಿಯನ್ನು ನಿಮರ್ಿಸಿದ್ದ ಎಂಬುದು ಪ್ರತಿತಿಯಿದೆ. ಹೀಗೆ ಈ ಪುಷ್ಕಕರಣಿಯನ್ನು ಪಾಂಡವರು ರಾತ್ರಿಯಲ್ಲಿ ಆರಂಭಿಸಿ ಬೆಳಗಾಗುವ ಮುನ್ನ ಮಾಡಿ ಮುಗಿಸಿದರೆಂದು ಇನ್ನೊಂದು ಉಲ್ಲೇಖವಾಗಿದೆ. ಹೀಗೆ ಈ ದೇವಾಲಯ ಪರಿಪೂರ್ಣವಾಗಿ ಬೃಹತ್ ಕಲ್ಲುಗಳಿಂದ ಮಾಡಲ್ಪಟ್ಟಿದೆ. ವಿಚಿತ್ರ, ವಿಸ್ಮಯ ರೀತಿಯಲ್ಲಿ ಬೃಹದಾಕಾರದ ಕಲ್ಲಿನಿಂದ ಈ ದೇವಾಲಯ ನಿರ್ಮಿತವಾಗಿದೆ. ಈ ದೇವಾಲಯದ ಪ್ರದಾನ ದೇವತೆಯು 'ಶ್ರೀ ಕೋಟಿಲಿಂಗೇಶ್ವರ' ನು ಪ್ರಜ್ವಲಿತ ಸೂರ್ಯನಂತೆ ಕಂಗೊಳಿಸುತ್ತಾನೆ. ದೇವನು ಇಲ್ಲಿ ಗರ್ಭಗ್ರಹದ ಮದ್ಯೆ ಪುಟ್ಟದಾದ ಬಾವಿಯಲ್ಲಿ 'ಕೋಟಿಲಿಂಗ' ದ ರೂಪದಲ್ಲಿ ನೆಲೆಸಿ ಸರ್ವರನ್ನೂ ಕಾಯುತ್ತಾ ಇದ್ದಾನೆ. ಚಿಕ್ಕಬಾವಿಯಲ್ಲಿ 'ರುದ್ರಾಕ್ಷಿ' ಯನ್ನು ಹೋಲುವ ಪುಟ್ಟ-ಪುಟ್ಟ ಲಿಂಗಗಳು ಇವೆ. ಹಾಗೇ ಇಲ್ಲಿ ಪಂಚಲೋಹದ ಪರಶಿವನ ಮೂರ್ತಿ ಈ ಕೋಟಿಲಿಂಗದ ಮೇಲಿಂದ ಭಕ್ತರಿಗೆ 'ಕೋಟಿಲಿಂಗೇಶ್ವರ' ನಾಗಿ ಕಂಗೊಳಿಸುತ್ತಾನೆ. ಹೀಗೆ ರುದ್ರಾಭಿಷೇಕ ಪ್ರಿಯ ರುದ್ರನಿಗೆ ಅನುಗಾಲವು ರುದ್ರಾಭಿಷೇಕ ನಡೆಯುತ್ತಿರುತ್ತದೆ. ಈ ಪರಮಪವಿತ್ರ ಕ್ಷೇತ್ರ ಸರ್ವದೇವತೆಗಳ ನೆಲೆವೀಡು ಆಗಿದೆ ಎಂದರೆ ತಪ್ಪಾಗಲಾರದು. ಪರಶಿವನೊಂದಿಗೆ ಆದಿಶಕ್ತಿ ರೂಪಿಣಿಯಾದ ಸರ್ವಮಂಗಳೆ ಶಿವನ ಎಡದಲ್ಲಿ ದಕ್ಷಿಣಕ್ಕೆ ಮುಖಮಾಡಿ ಕುಳಿತು ಸರ್ವರ ಅಭಿಷ್ಟವನ್ನು ಈಡೇರಿಸುತ್ತಾ ಇದ್ದಾಳೆ. ಇವಳ ಪುಟ್ಟ ವಿಗ್ರಹ ಅತೀ ಸುಂದರ ಮನೋಹರವಾಗಿದೆ. ಹೀಗೆ ಪರಶಿವನನಿಗೆ ಎಡದಲ್ಲಿ ಶಿವನಿಗೆ ಮುಖಮಾಡಿ ಬ್ರಹತ್ ನಂದಿಯು ಕುಳಿತು ಜ್ಞಾನವನ್ನು ಬೆಳಗುತ್ತಾದ್ದಾನೆ. ಪಾರ್ವತಿ ಪರಶಿವನ ಪ್ರೀತಿ ಪುತ್ರ ವಿಘ್ನನಾಶಕನಾದ ಶಿವನ ಬಲಭಾಗದಲ್ಲಿ 'ಮೂಲೆಗಣಪತಿ' ಎಂಬ ನಾಮದಿಂದ ಕ್ಷೇತ್ರದ ಕಾರಣಿಕ ಶಕ್ತಿಯಾಗಿ ನೆಲೆಸಿದ್ದಾನೆ. ಈ ದೇವ ಕಳೆದು ಹೋದ ಅಮೂಲ್ಯ ವಸ್ತುಗಳನ್ನು ಯಾವ ಮೂಲೆಯಲ್ಲಿದ್ದರೂ ಮರಳಿಕೊಡುತ್ತಾನೆ ಎಂಬುದು ಪ್ರತಿತಿ. ನಾವು ಪ್ರದಕ್ಷಿಣಾ ಪಥದಲ್ಲಿ ಸಾಗಿದಂತೆ ಮೊದಲಿಗೆ 'ಸಪ್ತಮಾತೃಕೆ' ಯರು ಒಡಗೂಡಿ ಕುಳಿತು, ಇವರೊಡನೆ ಭೂತಗಣಗಳ ನಾಯಕ 'ವೀರಭದ್ರ' ಮತ್ತು ಮಹಾಗಣಪತಿಯೂ ಕೂಡಾ ನೆಲೆಸಿದ್ದಾರೆ. ಮುಂದೆ ಹೆಜ್ಜೆಯಿಟ್ಟು ಸಾಗಿದಂತೆ ದೇವಾಲಯದ ಹಿಂಬಾಗದಲ್ಲಿ 'ಶ್ರೀ ಸುಬ್ರಹ್ಮಣ್ಯ ಸ್ವಾಮಿ' ನೆಲೆಸಿ ನಿಂದಿದ್ದಾನೆ. ಅದೇ ಪಥದಲ್ಲಿ ನಡೆದಾಗ 'ಜ್ಯೇಷ್ಠ ಲಕ್ಷ್ಮಿ' ನೆಲೆಸಿದ್ದಾಳೆ. ಮುಂದೆ ಸಾಗಿದಂತೆ 'ಮಹಿಷಾಸುರ ಮರ್ನಿದಿನಿಯು' ವಿರಾಜಮಾನಳಾಗಿ ನಿಂದಿದ್ದಾಳೆ. ಅದೇ ರೀತಿ ವೆಂಕಟರಮಣ, ತಾಂಡವೇಶ್ವರ ಕೂಡಾ ಒಳ ಪ್ರಾಕಾರಗಳಲ್ಲಿ ನೆಲೆಸಿ ನಿಂದಿದ್ದಾರೆ.ಹೊರ ಪ್ರಕಾರದಲ್ಲಿ 'ಆದಿಗಣಪತಿ', 'ಮುಖ್ಯಪ್ರಾಣ', 'ಮಹಾವಿಷ್ಣು', 'ಗೋಪಾಲಕೃಷ್ಣ' ರು ನೆಲೆಸಿ ನಿಂದು ಭಕ್ತರ ಪೊರೆಯುತ್ತಾ ನಿಂದಿದ್ದಾರೆ. ಅದೇ ರೀತಿ ಇಲ್ಲಿ ಆಕರ್ಷಣೆಗಳ್ಲಿ 'ತಟ್ಟಿರಾಯ'ಗಳು ಬಹಳ ಆಕರ್ಷಣೀಯವಾಗಿವೆ. ಇಲ್ಲಿನ ಪುಷ್ಕರಣಿಯ ಕಲ್ಲುಗಳ ಮೇಲೆ ಅನೇಕ ಪ್ರಾಣಿ-ಪಕ್ಷಿಗಳ ಕೆತ್ತನೆಗಳೂ ಕೂಡಾ ಕಂಡು ಬರುತ್ತದೆ. ಅದರಲ್ಲಿ ನವಿಲು, ಮೊಸಳೆ, ಆಮೆ ಹಾಗೆ ಶಿವಲಿಂಗವೂ ಕೂಡಾ ಇದೆ. ಶಿವಲಿಂಗ ಇರುವ ಸ್ಥಳದಲ್ಲಿ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಹಾಗೆ ಅಲ್ಲೇ ಪಕ್ಕದಲ್ಲಿ ಪ್ರಸನಃ ಗಣಪತಿಯ ಗುಡಿಯು ಇದೆ. ಇಲ್ಲಿ "ಕೊಡಿ ಹಬ್ಬದ" ದಿನ ಈ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿ ನಂತರ ಇಲ್ಲಿ ಗಣಪತಿಯನ್ನು ಮೊದಲು ವಂದಿಸುವುದು ರೂಢಿ. ಇಲ್ಲಿ "ಕೊಡಿ ಹಬ್ಬ" ವು ಅತ್ಯಂತ ಪ್ರಸಿದ್ದವಾದ ಹಬ್ಬವಾಗಿದೆ. ಇಲ್ಲಿನ ಹಬ್ಬವು ಕಾರ್ತಿಕ ಮಾಸ ಹುಣ್ಣಿಮೆಯ ದಿನ ವಿಜೃಂಭಣೆಯಿಂದ ನಡೆಯುತ್ತದೆ. ನೀವೂ ಒಮ್ಮೆ ಈ ಪರಮ ಪವಿತ್ರ ಶ್ರೀ ಕೋಟಿಲಿಂಗೇಶ್ವರನ ಕ್ಷೇತ್ರಕ್ಕೆ ಬನ್ನಿ, ಸಕಲ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗಿ. ಮಾರ್ಗ ವಿವರ: ಶ್ರೀ ಕ್ಷೇತ್ರಕ್ಕೆ ಉಡುಪಿಯಿಂದ ಹಲವಾರು ಬಸ್ಸಿನ ವ್ಯವಸ್ಥೆಗಳು ಇವೆ. ಉಡುಪಿಯಿಂದ ಉತ್ತರಕ್ಕೆ ಸುಮಾರು 30ಕಿ.ಮಿ ಹಾಗೂ ಕುಂದಾಪುರದಿಂದ ಸುಮಾರು 4 ಕಿ.ಮಿ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಈ ಪರಮ ಪವಿತ್ರ ಕ್ಷೇತ್ರವಿದೆ. -

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...