Friday, 17 July 2020

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ,ಮರಳುಗಾಡಿಗೆ ಪ್ರಸಿದ್ದಿ ಪಡೆದಿರುವುದು ಎಷ್ಟು ಸತ್ಯವೋ, ಅಷ್ಟೇ ಪ್ರವಾಸೋದ್ಯಮಕ್ಕೂ ಜಗ್ತ್ಪ್ರಸಿದ್ದವಾಗಿದೆ.,. ಈ ದೇಶವನ್ನು ಭೂಮಿ ಮೇಲಿನ ಸ್ವರ್ಗ ಎಂದೂ ಕರೆಯಲಾಗುತ್ತದೆ ಪ್ರಸಿದ್ಢ ತಾಣಗಳ ನಡುವೆ ಪ್ರವಾಸಿಗರನ್ನು ತನ್ನತ್ತಾ ಸೆಳೆಯಲು ಕ್ರತಕವಾಗಿಯೂ,ಒಂದಷ್ಟು ಯೋಜನೆ, ಯೋಚನೆ ಇಲ್ಲಿನ ಸರ್ಕಾರ ಬಗಲಿನಲ್ಲಿ ಇಟ್ಟು ಕೊಂಡಿದೆ ಅಂದರೂ ತಪ್ಪಲ್ಲ .,ಅದರಲ್ಲಿ ಒಂದು ಅಗಾಧವಾದ ಸ್ರಷ್ಠಿ ಸೋಜಿಗಕ್ಕೆ ಉದಾಹರಣೆ "ಗ್ಲೊಬಲ್ ವಿಲೇಜ್ "ಎಂಬ ಕಾನ್ಸೆಪ್ಟ್.!
ಪ್ರಪಂಚದ ಎಲ್ಲಾ ದೇಶಗಳ ಸಂಸ್ಕ್ರತಿ ,ವೈವಿದ್ಯತೆಯನ್ನು ಒಂದೇ ಸೂರಿನಲ್ಲಿ ಸವೆಯಲು ಸೂಕ್ತವಾದ ವೇದಿಕೆ ಈ "ಗ್ಲೊಬಲ್ ವಿಲೇಜ್ "!ಸುಮಾರು ೯೦ಕ್ಕೂ ಅಧಿಕ ದೇಶಗಳಿಗೆ ಒಂದೇ ರಾತ್ರಿಯಲ್ಲಿ ಹೋಗಿ ಬಂದಂತ ಅನುಭವ ಆಗಬಹುದು. ಉದಾಹರಣೆಗೆ ಭಾರತ ಎಂದ ಕೂಡಲೇ ಇಲ್ಲಿನ ತಾಜ್ ಮಹಾಲ್,ಮುಂಬೈ ಗೇಟ್.ಕೋಟೆ ಕೊತ್ತಲುಗಳ ಬ್ರಹತ್ ಸ್ಟ್ಯಾಚುಗಳು. ಅದರ ಒಳಹೊಕ್ಕರೇ,ಸಂಸ್ಕ್ರತಿ ,ಸಂಪ್ರದಾಯಗಳ ಅನಾವರಣವಾಗುತ್ತದೆ.ಸಂಗೀತ ಸಂಜೆ ಕೈಬೀಸಿ ಕರೆಯುತ್ತದೆ,ಕಲರ್ ಫುಲ್ ನೀರಿನ ಕಾರಂಜಿ ಮನಸೆಳೆಯುತ್ತದೆ,ಬಾನ ಮೇಲೆ ತರ-ತರಹ ಬಣ್ಣಗಳೊಂದಿಗೆ ಆಟವಾಡುತ್ತಾ ಮೈನವಿರೇಳಿಸುವ ಪಟಾಕಿಯ ಪ್ರಭಾವನ್ನು ಈ ಹಿಂದೆ ಎಲ್ಲೂ ಕಂಡರಿಯಲು ಸಾಧ್ಯವಿಲ್ಲ. ,ಆ ಸಾಂಸ್ಕ್ರತಿಕ ಕಾರ್ಯಕ್ರವನ್ನು ನೋಡುತ್ತಿದ್ದರೇ ಎಲ್ಲೂ ಕಳೆದು ಹೋಗಿ ಬಿಡುತ್ತೇವೆ.ಶುಚಿ ರುಚಿಯಾದ ಆಹಾರ ಮೇಳದಲ್ಲಿ ನಾಲಿಗೆ ಆಹಾ!! ಅನ್ನದೇ ಇರದು. ಮನಕ್ಕೆ ಮುದನೀಡುವ ಕ್ರೀಡೆಗಳು, ಇರುಳು-ಬೆಳಕಿನಲ್ಲಿ ಟೈಮ್ ಪಾಸು ಆಗಿದ್ದೇ ಗೊತ್ತಾಗೊಲ್ಲ, ಪ್ಯಾಮಿಲಿ ಜೊತೆಗೆ ಶಾಪಿಂಗ್ ಗೆ ಹೇಳಿಮಾಡಿಸಿದ ಜಾಗ , ಎಂಟರ್ಟೈಮೆಂಟ್ ಜೊತೆಗೆ ಅಗತ್ಯದಿಂದ,ಅಪೂರುಪದ ವಸ್ತುಗಳ ಭಂಡಾರ ಇಲ್ಲಿ ಗಮನಸೆಳೆಯುತ್ತದೆ. ಪ್ರತಿಯೊಂದು ಆಯಾಯ ದೇಶದ ಸಾಮಾಗ್ರಿಗಳು ಕೈಗೆಟಕುತ್ತದೆ. ಜಗತ್ತಿನ ಪ್ರಸಿದ್ದ ಸರ್ಕಸ್ ಆಟ ಒಂದೇ ಎರಡೇ ಎಲ್ಲವೂ ಒಂದೇ ಟೇಕ್ ನಲ್ಲಿ ಅನುಭವಿಸಲು ಗ್ಲೋಬಲ್ ವಿಲೇಜ್ ಬರಲೇ ಬೇಕು .
ದೂರದಿಲ್ಲಿದ್ದರೂ ನಮ್ಮ ದೇಶದಲ್ಲಿನ ಯಾವುದೋ ಜಾತ್ರೆನೋ,ವಾರ್ಷಿಕ ಮೇಳಕ್ಕೆ ಬಂದೆವೆನೋ ಎಂಬಂತೆ ಭಾಸವಾಗುತ್ತದೆ, ಇನ್ನಷ್ಟು ಆತುರ-ಕಾತುರವನ್ನು ಕಾಯ್ದು ಕೊಳ್ಳುತ್ತದೆ ,ಹೊಸ ಉತ್ಸಾಹ ,ಉಲ್ಲಾಸ, ಹುಮ್ಮಸ್ಸು,ಅದಮ್ಯ ಒಲವುನ್ನು ತಂದು ಕೊಡುತ್ತದೆ ಒಮ್ಮೆ ಒಳ ಹೊಕ್ಕರೆ ಹೊರಬರಲು ಮನಸ್ಸು ಬಾರದು, ಅದೇನೋ ಕಳೇದು ಕೊಂಡೇವು ಎಂಬತೆ ಭಾರವಾಗುತ್ತದೆ . ಇನ್ನು ಒಂದಷ್ಟು ಸಮಯ ಅಲ್ಲೇ ಇರಬೇಕು ಎಂಬ ಭಾವನೆ ಮೈದಳೆಯುತ್ತದೆ . ಈ ಎಲ್ಲಾವನ್ನು ಒಂದೇ ವೇದಿಕೆಯಲ್ಲಿ ಉಣಬಡಿಸುವ ಗ್ಲೊಬಲ್ ವಿಲೇಜ್ ,ಎಂಬ ಅತೀ ಹೆಚ್ಚು ಜನಸಾಗರವನ್ನು ತನ್ನ ತೆಕ್ಕೆಗೆ ಒಲಿಸಿಕೊಳ್ಳುವ ಈ ಕಾರ್ಯಕ್ರಮ ಸಿಗುವುದು ವರ್ಷದಲ್ಲಿ ಒಮ್ಮೆ ಮಾತ್ರ, ಸಮ್ಮರ್ ಸೀಜನ್ ನ ಆರು ತಿಂಗಳುಗಳಲ್ಲಿ.ಅಂದ ಹಾಗೆ ಇದು ಆರಂಭವಾಗಿದ್ದು ೧೯೯೭ ರಲ್ಲಿ .
ದುಬೈನ ಶೇಕ್ ಮಹಮ್ಮದ್ ಬಿನ್ ಝಾಯದ್ ಎಂಬ ಬ್ರಹತ್ ಮೈದಾನದಲ್ಲಿ ನಡೆಯುತ್ತದೆ. ಆರು ತಿಂಗಳುಗಳ ಕಾಲ ನಡೆಯುವ ಇದು ಶನಿವಾರ ದಿಂದ ಬುಧವಾರದ ಸಂಜೆ ೪ ಗಂಟೆ ಯಿಂದ ಮಧ್ಯೆ ರಾತ್ರಿ ೧೨ ಗಂಟೆ ತನಕ ಸಮಯ ನಿಗದಿಯಾದರೇ ಇನ್ನುಳಿದ ಗುರುವಾರ ಮತ್ತು ಶುಕ್ರವಾರ ಸಂಜೆ ೪ ಗಂಟೆ ಯಿಂದ ಮುಂಜಾನೆ ೧ ಗಂಟೆ ತನಕ ಸಮಯ ವಿರುತ್ತದೆ. ಪ್ರತಿ ಸೋಮವಾರ ವಿಶೇಷವಾಗಿ ಮಹಿಳೇಯರಿಗೆ ಮತ್ತು ಪ್ಯಾಮಿಲಿದಾರರಿಗೆ ಡೆಡಿಕೇಶನ್ ಮಾಡಲಾಗುತ್ತದೆ. ಇದಕ್ಕೆ ಪ್ರವೇಶ ಶುಲ್ಕ ೧೫ ದಿರಮ್ ಆಗಿರುತ್ತದೆ. ಈ ಬಾರಿ ಅಕ್ಟೋಬರ್ ೨೦೨೦ ರಿಂದ ಎಪ್ರಿಲ್ ೨೦೨೧ರವರೆಗೆ ನಡೆಯಲಿದೆ. ಯುಎಇ ಬಂದವರು ಇದರ ಸವಿಯನ್ನು ಉಣದೇ ಇದ್ದರೇ ತಮ್ಮ ವಿಸಿಟ್ ಗೆ ಬೆಲೆ ಇರೋಲ್ಲ ,ಪ್ರವಾಸ ಕೈ ಗೊಳ್ಳುವವರು ಅಕ್ಟೊಬರ್ ಯಿಂದ ಎಪ್ರಿಲ್ ಒಳಗೆ ಬೇಟಿ ನೀಡಿದರೇ ಒಳ್ಳೆದು .ಆ ಸಮಯದಲ್ಲಿ ಇದು ಕಾಣ ಸಿಗುತ್ತದೆ

Wednesday, 15 July 2020

ಯಕ್ಷಗಾನ ಪ್ರಸಂಗ ಆರಂಭದ ಕ್ರಮ ಹೀಗಿತ್ತು !

ಸಾಧಾರಣ ಸುಮಾರು 60 - 65 ವರ್ಷಗಳ ಹಿಂದೆ ನಮ್ಮ ಹಿರಿಯರ ನೆನಪಿನ ಪ್ರಕಾರ ಯಕ್ಷಗಾನ *ಆರಂಭ ಆಗುವ ಕ್ರಮ* ಹೇಗಿತ್ತು ? ▪️ಮುಸ್ಸಂಜೆ ಹೊತ್ತಿನಲ್ಲಿ ಅಂದರೆ ಸಾಧಾರಣ 6.30 ರ ವೇಳೆಗೆ ಕೇಳಿ ಬಡಿಯುವುದು. (ಆಗ ಧ್ವನಿವರ್ಧಕಗಳು ಇಲ್ಲದ ಕಾರಣ, ಆ ಊರಿನ ಎತ್ತರದ ಜಾಗೆಯಲ್ಲಿ ನುಡಿಸುವ ಕ್ರಮವೂ ಇತ್ತಂತೆ, ಪ್ರದರ್ಶನ ಜರಗುವ ಪೂರ್ವ ಮಾಹಿತಿ ಮತ್ತು ಮುನ್ಸೂಚನೆಗೂ ಆಗಿರಬಹುದೆಂಬ ಅಭಿಮತ) ▪️7.30 ಕ್ಕೆ ಸರಿಯಾಗಿ ಚೌಕಿಪೂಜೆ ಆದ ನಂತರ ಪ್ರಸಾದ ಸ್ವೀಕರಿಸಿ ಕೋಡಂಗಿ ದೀವಟಿಗೆ ಜೊತೆ ರಂಗಕ್ಕೆ ಬರುವುದು. ( ಬಣ್ಣದ ವೇಷಧಾರಿಗಳು, ಚುಟ್ಟಿ ಇಡಲು ಆರಂಭಿಸಿ, ಚುಟ್ಟಿ ಇಟ್ಟದ್ದು ಗಟ್ಟಿಯಾಗಲೇ ಸರಿಸುಮಾರು ಐದಾರು ಗಂಟೆ ತಗೊಳುತಿತ್ತಂತೆ) ▪️ರಂಗಸ್ಥಳ ಪೀಠಿಕೆ. (ಹಿಮ್ಮೇಳದ ನುಡಿತ, ಯಕ್ಷಗಾನದಲ್ಲಿ ಉಪಯೋಗಿಸುವ ಎಲ್ಲಾ ತಾಳಗಳನ್ನು ನುಡಿಸಲು ವೇದಿಕೆಯಾಗಿಯೂ, ಮೇಳದಲ್ಲೇ ಇರುವ ಪ್ರಥಮಾಭ್ಯಾಸಿಗೆ ಅನುಕೂಲವಾಗಲು ಈ ಕ್ರಮದ ಉಪಯೋಗ ಎಂಚ ಮಾತಿದೆ.) ▪️ಮುದದಿಂದ ನಿನ್ನ ಪದ್ಯದಿಂದ ರಾಮಭದ್ರ ಗೋವಿಂದ ಪದ್ಯದವರಗೆ ಕೋಡಂಗಿಗಳ ಕುಣಿತ. ಇದಕ್ಕೆ ಸುಮಾರು ಒಂದು ಗಂಟೆ ಹಿಡಿಯುತ್ತಿತ್ತು. (ಕೋಡಂಗಿಗಳ ವೇಷವನ್ಬು, ಸಾಧಾರಣ ಬಾಲಕಲಾವಿದರೇ ನಿರ್ವಹಿಸುತಿದ್ದರು. ಇದಕ್ಕೂ ಒಂದು ಮೂಲ ಕಾರಣವಿದೆ. ಸಭಾಕಂಪನದ ತೊಂದರೆ, ಅಂಜಿಕೆ ದೂರವಾಗಿ, ರಂಗಸ್ಥಳದ ನಡೆ ನಾಟ್ಯದ ಗತಿಮಿತಿ ಅರಿಯುವ ಬುನಾದಿಗಾಗಿ ಎಂಬುದಕ್ಕಾಗಿ) ▪️ಆಮೇಲೆ ಹರೇ ರಮಣ ಪದ್ಯಕ್ಕೆ ಬಾಲಗೋಪಾಲರ ಪ್ರವೇಶ. (ಬಲರಾಮ ಮತ್ತು ಗೋಪಾಲಕೃಷ್ಣರು.ಹಿಂದೆ ಬಲ ಗೋಪಾಲರು ಎಂದು ಬಳಕೆಯಲ್ಲಿದ್ದ ಪದ ಪ್ರಯೋಗವು ಈಗ ಬದಲಾವಣೆ ಹೊಂದಿ ಬಾಲಗೋಪಾಲರು ಎಂದಾಗಿದೆ.) . ▪️ಚೌಕಿಯಿಂದ ದೇವರನ್ನು ರಂಗಕ್ಕೆ ತರುವುದು. ಬಾಲ ಗೋಪಾಲರ ಕುಣಿತ ಮುಂದುವರಿಯುತ್ತದೆ ಜೊತೆಗೆ ಕೋಡಂಗಿ ವೇಷಗಳು ಇರಬೇಕು. ಇಲ್ಲಿ ಸುಮಾರು ಒಂದು ಗಂಟೆಯ ಕುಣಿತವಿರುತ್ತದೆ. ನಂತರ ಚೌಕಿಗೆ ನಿರ್ಗಮನ. (ದೇವರು ಬಂದು ರಥದಲ್ಲಿ ಕುಳಿತುಕೊಳ್ಳುವಾಗ, ರಂಗಸ್ಥಳದಲ್ಲಿ ಕುಳಿತಿರುವ ಹಿಮ್ಮೇಳದವರೂ ನಿಂತು, ನುಡಿಸಿ ಹಾಡುವ ಗೌರವದ ಸಂಪ್ರದಾಯ ಈಗಲೂ ಇದೆ.) ▪️ಷಣ್ಮುಖ ಸುಬ್ರಾಯ ವೇಷದ ಪ್ರವೇಶ. (ಹಿಂದೆ ಈ ಎಲ್ಲಾ ಪಾತ್ರಗಳನ್ನು ನಾಟ್ಯ ಕಲಿಯಲು ಬಂದ ವಿದ್ಯಾರ್ಥಿಗಳೇ ಮಾಡುತ್ತಿದ್ದುದು. ಕಾರಣ ಈಗಿನಂತೆ ನಾಟ್ಯ ತರಗತಿಗಳು ನಡೆಯುತ್ತಿರಲಿಲ್ಲ. ನಾಟ್ಯ ಕಲಿಯಬೇಕಾದರೆ ಮೇಳದಲ್ಲಿಯೇ ಇದ್ದು ಕಲಿಯಬೇಕಿತ್ತು, ಪ್ರಸ್ತುತ ಈ ವೇಷ ಮರೆಯಾಗಿದೆ ). ▪️ಷಣ್ಮುಖ ಸುಬ್ರಾಯ ವೇಷದ ನಿರ್ಗಮನದ ನಂತರ ಮುಖ್ಯ ಸ್ತ್ರೀ ವೇಷ ಬರುವುದು. (ಹಿಂದೆ ಮುಖ್ಯ ಸ್ತ್ರೀ ವೇಷವು ಒಂದೇ ಇತ್ತು). ಜೊತೆಗೆ ಒಂದು ಹೊಗಳಿಕೆ ವೇಷ. ▪️ಚಂದಭಾಮಾ ಸ್ತ್ರೀ ವೇಷ. (ಈಗ ಈ ವೇಷವು ಮರೆಯಾಗಿದ್ದು ಇದನ್ನು ಮುಖ್ಯ ಸ್ತ್ರೀ ವೇಷದ ಜೊತೆ ಸೇರಿಸಿ ಈಗ ಎರಡು ಮುಖ್ಯ ಸ್ತ್ರೀ ವೇಷಗಳಾಗಿವೆ). ▪️ಚಪ್ಪರಮಂಚ ಸ್ತ್ರೀ ವೇಷ . (ಇದು ಮರೆಯಾಗಿದೆ) ▪️ಅರ್ಧನಾರೀ ವೇಷ. (ಈ ವೇಷವೂ ಪ್ರಸ್ತುತ ಇಲ್ಲ) ▪️ಅರೆಪ್ಪಾವಿನ ಆಟ(ಹಾವಾಡಿಗರ ಕುಣಿತ), ಕೊಕ್ಕೆ ಚಿಕ್ಕಿನ ಹಾಸ್ಯ, ರಂಗರಂಗಿ ಹಾಸ್ಯ ಮುಂತಾದ ಹಲವು ಕಟ್ಟು ಹಾಸ್ಯಗಳಿದ್ದವು. (ಈ ಕಟ್ಟು ಹಾಸ್ಯಗಳಲ್ಲಿ ಯಾವುದೇ ರೀತಿಯ ನಿಬಂಧನೆಗಳು ಇರಲಿಲ್ಲ. ಕಲಾವಿದರು ಅವರಿಗೆ ತೋಚಿದ ಹಾಸ್ಯವನ್ನು ರಂಗದಲ್ಲಿ ಬಂದು ಅಭಿನಯಿಸುತ್ತಿದ್ದರು. ಈ ಎಲ್ಲಾ ಪಾತ್ರಗಳಿಗೂ ಯಾವುದೇ ರೀತಿಯ ನಿಯಮಗಳು, ಸಮಯದ ಮಿತಿ ಇವೆಲ್ಲ ಯಾವುದೂ ಇರಲಿಲ್ಲ. ಮೇಳದ ಯಜಮಾನ, ಕಲಾವಿದರು ಇವರ ಹೊಂದಾಣಿಕೆಯಲ್ಲಿ ವೇಷಗಳು ರಂಗಕ್ಕೆ ಬರುತ್ತಿದ್ದವು). ಹಾಸ್ಯಗಾರರ ನಿರ್ಗಮನ ▪️ಪ್ರಸಂಗ ಪೀಠಿಕೆ. ▪️ಕಚ್ಚೆ ಸ್ತ್ರೀ ವೇಷ(ತೆಂಕುತಿಟ್ಟಿನಲ್ಲಿ ಇದಕ್ಕೆ ಪೀಠಿಕೆ ಸ್ತ್ರೀ ವೇಷ ಎಂದೂ ಹೇಳುತ್ತಾರೆ)ದ ಪ್ರವೇಶ. ▪️ಒಡ್ಡೋಲಗ. (ಸಾಧಾರಣವಾಗಿ ದೇವೆಂದ್ರನ ಒಡ್ಡೋಲಗವೇ ಚಾಲ್ತಿಯಲ್ಲಿ ಇತ್ತು, ಈಗಲೂ ಹಲವು ಮುಂದುವರಿದಿದೆ.) ಪಾಂಡವರ ಒಡ್ಡೋಲಗವಿದ್ದರೆ , ಕೃಷ್ಣನ ತೆರೆಕುಣಿತ, ರಾಮಲಕ್ಷಣರ ತೆರೆಕುಣಿತವೂ ಮೊದಲಿನ ಸಂಪ್ರದಾಯದಲ್ಲಿತ್ತಂತೆ ▪️ಪ್ರಸಂಗ ಆರಂಭ... ಹಿಂದೆ ಇಷ್ಟೆಲ್ಲಾ ಪಾತ್ರಗಳು ರಂಗಕ್ಕೆ ಬಂದು ಪಾತ್ರ ನಿರ್ವಹಿಸಲು ಚೌಕಿಪೂಜೆಯ ನಂತರ ಸುಮಾರು 4 ರಿಂದ 4.30 ಗಂಟೆಗಳಷ್ಟು ಸಮಯ ಹಿಡಿಯುತ್ತಿತ್ತು. ಸಾಧಾರಣವಾಗಿ 7.30 ಕ್ಕೆ ಚೌಕಿಪೂಜೆ ಆಗಿ ನಂತರ ಪ್ರಸಂಗ ಆರಂಭ ಆಗುವಾಗ ಸುಮಾರು 11.30 ಯಿಂದ 12 ಗಂಟೆಗಳಾಗುತ್ತಿತ್ತು. ಮಾಹಿತಿ ಸಂಗ್ರಹ : *ಯಕ್ಷಭಾಗವತಹಂಸ ಗ್ರೂಪ್*

Sunday, 12 July 2020

'ರಂಗಸ್ಥಳಂ'ಎಂಬ ಸಿನಿಮಾದ ಸುತ್ತಾ.....

ಇತ್ತೀಚೆಗೆ ನನಗೆ ಹಿಡಿಸಿದ ಚಲನಚಿತ್ರ ಅಂದರೆ ಅದು ತೆಲುಗಿನ ರಾಮ್ ಚರಣ್ ಮತ್ತು ಸಮಂತಾ ಅಭಿನಯದ ,ಸುಕುಮಾರ್ ನಿರ್ದೇಶನದ 2018ರಲ್ಲಿ ತೆರೆಕಂಡ ರಂಗಸ್ಥಳಂ. ಹೆಸರು ಸ್ವಲ್ಪ ವಿಚಿತ್ರಕಾರಿಯಾಗಿ ಕಂಡರೂ, ರಂಗಸ್ಥಳ ಎಂಬುದು ಒಂದು ಊರಿನ (ಹಳ್ಳಿ)ಹೆಸರು.ತೀರ 15 ರಿಂದ 20 ವರ್ಷಕ್ಕೂ ಹಳೆಯ ಹಳ್ಳಿಯ ನೈಜ ಸ್ಠಿತಿಯನ್ನು ಕಣ್ಮುಂದೆ ತರುವಂತಹ ಅಧ್ಭುತ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾ . ಸುಮಾರು 2 ಗಂಟೆ 40 ನಿಮಿಷದ ಚಿತ್ರವಾದರೂ, ಎಲ್ಲೂ ಕೂಡಾ ಉದ್ದ ಚಿತ್ರ ಎಂಬ ಭಾವನೆಯನ್ನು ಹುಟ್ಟೀಸುವುದೇ ಇಲ್ಲ. ಹಾಗೆ ಎಲ್ಲೂ ಬೊರ್ ಹೊಡಿಸದಂತೆ ನಿರ್ದೇಶಕರು ಚಿತ್ರಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ನಾಯಕ ರಾಮ್ ಚರಣ್ (ಚಿಟ್ಟಿ ಬಾಬು ),ಸುಮಂತಾ (ರಾಮ ಲಕ್ಷ್ಮಿ) ಹಳ್ಳಿಸೊಗಡಿಗೆ ಎಲ್ಲೂ ಕಳಂಕಬಾರದಂತೆ ಅಮೊಘವಾಗಿ ನಟಿಸಿದ್ದಾರೆ. ಎಂದಿನಂತೆ ವಿಲನ್ ಆಗಿ ಜಗಪತಿ ಬಾಬು ( ಫಣಿಂದ್ರ ಭೂಪತಿ,)ಆಕ್ಟಿಂಗ್ ಸೂಪರ್.ನಾಯಕ ಅಣ್ಣನಾಗಿ ಆಧಿ ಪಿಣಿಸೆಟ್ಟಿ (ಕುಮಾರ್) ತಮ್ಮ ಪಾತ್ರ ಜೀವ ತುಂಬಿದ್ದಾರೆ.
ಆ ರಂಗಸ್ಥಳ ಎಂಬ ಹಳ್ಳಿಗೆ ,ಜಗಪತಿ ಬಾಬು(ಫಣಿಂದ್ರ ಭೂಪತಿ)ಆತನೇ ಪ್ರೇಸೆಡೆಂಟ್ .ಆತ ಹೇಳಿದಂತೆ ಊರವರು ನಡೆದುಕೊಳ್ಳಬೇಕು. ಆತನ ಕ್ರೂರ,ದೌರ್ಜನ್ಯ ರಹಿತ ಆಡಳಿತ ವ್ಯವಸ್ಥೆಗೆ ಜನರು ರೋಸಿ ಹೋದರೂ, ಆತನ ಎದುರು ಮಾತನಾಡಲು ಭಯ ನಮಗೆ ,ಕುಟುಂಬ ಸದಸ್ಯರಿಗೆ ತೊಂದರೆ ಮಾಡುತ್ತಾನೋ ಎಂಬ ಅಸಹಾಯಕತೆ. ತೀರ ಬೇಸತ್ತ ಕೆಲವು ಧೈರ್ಯವಂತರು ಪ್ರೇಸಿಡೆಂಟ್ ಚುನಾವಣೆಗೆ ಸ್ಪರ್ಧಿಸಿದರೇ, ತನ್ನ ಪವರ್ ಮೂಲಕ ಯಾರಿಗೂ ಗೊತ್ತಾಗದಂತೆ ಅವರನ್ನು ಮುಗಿಸಿಬಿಡುವ ಚಾಲಾಕಿತನ ಆತನಲ್ಲಿ ಇತ್ತು , ನಾಯಕ ಚಿಟ್ಟಿ ಬಾಬುಗೆ ನಿಧಾನವಾಗಿ ಹೇಳಿದರೇ ಕಿವಿ ಕೇಳಿಸದು . ಆತನ ಅಣ್ಣ ಆಧಿ ಪಿಣಿಸೆಟ್ಟಿ (ಕುಮಾರ್).ದುಬೈ ಯಿಂದ ಬಂದ ನಾಯಕನ ಅಣ್ಣ ಫಣಿಂದ್ರ ಭೂಪತಿ ಉಪಟಳವನ್ನು ತಾಳಲಾರದೇ ತಾನೇ ಪ್ರೇಸಿಡೆಂಟ್ ಚುನಾವಣೆಗೆ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿರುತ್ತಾನೆ ಇನ್ನೇನು ಬೆರಳಣಿಕೆ ದಿನಗಳಲ್ಲಿದ್ದ ಒಂದು ದಿನ ರಾತ್ರಿ ಫಣಿಂದ್ರ ಭೂಪತಿ, ಕಡೇಯುವರು ಅಟೆಕ್ ಮಾಡುತ್ತಾರೆ,ಸರಿಯಾದ ಸಮಯ ಹೀರೊ ಎಂಟ್ರಿಯಾದುದರಿಂದ ಸಾವಿನ ದವಡೆ ಯಿಂದ ಆ ಸಮಯದಲ್ಲಿ ಪಾರಾದರೂ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಣ್ಣನನ್ನು ಎತ್ತಿಕೊಂಡು ಹಾದಿಯಲ್ಲಿ ಕಂಡ ಅಜ್ಜಿ ಅಂಗಡಿಯಲ್ಲಿ ಪೂರ್ತಿ ಗಾಯಗೊಂಡ ಅಣ್ಣನಿಗೆ ಗಾಯಕ್ಕೆ ಅರಿಶಿಣ ಪುಡಿ ತರಲು ಹೋದಾಗ,ಇತ್ತ ಅಣ್ಣನಿಗೆ ಕತ್ತಿಯಿಂದ ಕುತ್ತಿಗೆ ಬೀಸಿ ಅನಾಮಿಕನೊಬ್ಬ ಪಾರಾಗುತ್ತಾನೆ. ಉಸಿರು ಬಿಡುವ ಮುನ್ನಾ ತಾನು ಸಾಯುವುದಕ್ಕೆ ಕಾರಣನಾದ ವಿಲನ್ ಬಗ್ಗೆ ಸುಳಿವು ಕೊಟ್ಟರೂ, ಕಿವಿ ಕೇಳಿಸಿದ ತಮ್ಮ ಹೀರೋಗೆ ಅರ್ಥವಾಗುವುದಿಲ್ಲ ,ಇತ್ತ ಪರಾರಿಯಾದ ಖಳ ನಾಯಕ ಫಣಿಂದ್ರ ಭೂಪತಿಯನ್ನು ಪತ್ತೆ ಹಚ್ಚಿ ಸಾಯಿಸುತ್ತಾನೆ. ಅಣ್ಣನ ಸಾವಿಗೆ ಕಾರಣವಾದ ವ್ಯಕ್ತಿಯನ್ನು ಪತ್ತೆ ಹಚ್ಚುತ್ತಾನೆ ,ತಮ್ಮ ಜೊತೆಗೆ ಉತ್ತಮವ ಒಡನಾಟ ಬೆಳೆಸಿದ್ದ ಎಂ.ಎಲ್.ಎ ಅನ್ನುವುದಕ್ಕೆ ಹೆಚ್ಚಿನ ಸಮಯ ಬೇಕಾಗಿರುವುದಿಲ್ಲ. ಅದೇ ಕ್ಷಣ ಆ ಎಂ.ಎಲ್.ಗೆ ರಸ್ತೆ ಅಪಘಾತವಾಗುತ್ತದೆ. ಸತ್ತೇ ಹೋಗುತ್ತಿದ್ದ ಎಂ.ಎಲ್ ಎ ಪ್ರಕಾಶ್ ರಾಜ್ (ದಕ್ಷಿಣ ಮೂರ್ತಿ)ಯನ್ನು ಹೇಗೋ ಬದುಕಿಸಿ,ಎರಡು ವರ್ಷಗಳ ಕಾಲ ಆರೈಕೆ ಮಾಡಿ ಪೂರ್ಣ ಗುಣಮುಖನಾದ ಮೇಲೆ ಮೀಟ್ ಮಾಡುತ್ತಾನೆ., "ನಿನ್ನ ಅಣ್ಣ ತನ್ನ ಮಗಳನ್ನು ಲವ್ ಮಾಡುತ್ತಿದ್ದ ,ನೀವುಗಳು ನನ್ನ ಪ್ರೆಷ್ಟೀಜ್ಗೆ ಯಾವ ತರಹದಲ್ಲೂ ಸರಿಸಮಾನರಲ್ಲ ಅದೇ ಕಾರಣದಿಂದ ಕೊಲೆ ಮಾಡಿಸಿದ್ದು ಎಂದು ಒಪ್ಪಿಕೊಳ್ಳುತ್ತಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸು ಎಂದು ಆತನ ಕತ್ತಿಗೆ, ಕತ್ತಿ ಇಟ್ಟು ಮನೆಕಡೆ ಧಾವಿಸುತ್ತಾನೆ ಕಥಾನಾಯಕ . ಬೆಷ್ಟ್ ಯಾಕ್ಟರ್,ಬೆಷ್ಟ್ ಆಡಿಯೋ ಗ್ರಾಫಿ, ಬೆಷ್ಟ್ ಸಪೋರ್ಟಿಂಗ್ ಯಾಕ್ಟರ್,ಬೆಷ್ಟ್ ಸಿನಿಮಾಟೋಗ್ರಾಫರ್,ಬೆಷ್ಟ್ ಮ್ಯೂಸಿಕ್ ಡೈರೆಕ್ಟರ್, ಎಂಬ ಐದು ಫಿಲ್ಮ್ ಫೇರ್ ಅವಾರ್ಡ್ ಸಿಕ್ಕಿದೆ. ನಿಜಕ್ಕೂ ನೈಜ ಘಟನೆಗೆ ಹಿಡಿದ ಕನ್ನಡಿ ಈ ಚಿತ್ರ. ನಿರ್ದೇಶಕರು ,ಚಿತ್ರವನ್ನು ನಿಗೊಡತೆಯಲ್ಲಿ ನಿರೂಪಿಸಿದ ರೀತಿ ಅದ್ಬುತ ,ಆದಿ ಯಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳ್ಳರಿಸಿ ನೋಡಿಸಿ ಕೊಂಡು ಹೋಗುವ ರೀತಿ ವಿಷೇಶವದದ್ದು.

Tuesday, 7 July 2020

ಪವಾಡ ಪುರುಷ ಪುರಿ ಜಗನ್ನಾಥ

ಕ್ರೂರಿ ಕೊರೊನಾದ ಹಾವಳಿಯಿಂದ ಎಲ್ಲಾ ಕಾರ್ಯಕ್ರಮಗಳಿಗೂ ದೊಡ್ಡ ಹೊಡೆತ ಬಿದ್ದಿತು.ಧಾರ್ಮಿಕ ಕಾರ್ಯಕ್ರಮಗಳು ಸಹಾ ಇದಕ್ಕೆ ಹೊರತಾಗಿಲ್ಲ ,ಹೇಳಿ ಕೇಳಿ ಇದೀಗ ಉತ್ಸವದ ಸಮಯ.,ಅನಿವಾರ್ಯವಾಗಿ ಸಾಕಷ್ಟು ದೇವಾಲಯಗಳಲ್ಲಿ ವಾರ್ಷಿಕ ಉತ್ಸವವನ್ನು ನಿಲ್ಲಿಸಲೇ ಬೇಕಾಯಿತು. ಅಂತೆಯೇ ಜಗದ್ವಿಖ್ಯಾತ ಒಡಿಸ್ಸಾದ ಪುರಿ ಜಗನ್ನಾಥ ರಥಯಾತ್ರೆಯನ್ನು ನಡೆಸಲು ಈ ಮೊದಲು ಸುರ್ಪೀಂ ಕೋರ್ಟ್ ನಿರಾಕರಿಸಿತ್ತು. ಭಕ್ತಾಧಿಗಳ ಮನದಲ್ಲೂ ಸಹಾ ನೋವು ಮನೆ ಮಾಡಿತ್ತು, ಆದರೂ ಅವರ ಮನದಲ್ಲಿ ಎಲ್ಲೋ ಆಶಾ ಭಾವನೆಯೂ ಇತ್ತು ಇದು ನಡೇದೇ ನಡೆಯುತ್ತದೆ ಎಂದು . ಕಾರಣ ಜಗನ್ನಾಥನ ಮಹಿಮೆ ಅಂತದ್ದು. ಪುರಿ ಜಗನ್ನಾಥ ಶಕ್ತಿ ಕಡಿಮೆಯೇನು ಅಲ್ಲಾ ,ಪವಾಡ ಪ್ರಖ್ಯಾತಿಯನ್ನು ಪಡೆದವನು .ಅಂತೂ ಇ೦ತೂ ತಮ್ಮ ಆದೇಶವನ್ನು ವಾಪಾಸ್ಸು ಪಡೆದು ಕೊಂಡ ಸುರ್ಪೀಂ ಕೋರ್ಟ್ ಸೋಮವಾರ ಷರತ್ತುಬದ್ದ ಅನುಮತಿ ನೀಡಿದೆ.
ಯಾತ್ರೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿತ್ತು. ಕೋಟ್ಯಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ನಡೆಸಲು ಅನುಮತಿ ಕೊಡುವಂತೆ ಅರ್ಜಿಯಲ್ಲಿ ತಿಳಿಸಿತ್ತು. ಸಾರ್ವಜನಿಕರ ಆರೋಗ್ಯ ಮತ್ತು ನಾಗರಿಕ ಸುರಕ್ಷತೆಯ ಹಿತಾಸಕ್ತಿಯ ಕಾರಣದಿಂದ ಈ ವರ್ಷ ಪುರಿ ರಥಾ ಯಾತ್ರೆಯನ್ನು ಅನುಮತಿ ನೀಡುವುದಿಲ್ಲ ಜೂನ್ 18ರ ಆದೇಶದಲ್ಲಿ ತಿಳಿಸಿತ್ತು. ‘ಯಾತ್ರೆಗೆ ಅವಕಾಶ ನೀಡಿದರೆ ಅದನ್ನು ಜಗನ್ನಾಥ ಕ್ಷಮಿಸುವುದಿಲ್ಲ ಎಂದು ಸಿಜೆಐ ಬೊಬ್ಡೆ ಅವರು ಹೇಳಿದ್ದರು.ಈ ಆದೇಶದ ಬೆನ್ನಲ್ಲೇ ಒಡಿಸ್ಸಾದ ಸರ್ಕಾರ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಕೆಲವು ಮುನ್ನೆಚ್ಚರಿಕ ಕ್ರಮಗಳೊಂದಿಗೆ ಮೆರವಣಿಗೆಯನ್ನು ನಡೆಸಲು ಸಿದ್ಧ ಎಂದು ಒಡಿಸ್ಸಾ ಸರ್ಕಾರ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮನವಿಯನ್ನು ಪುರಸ್ಕರಿಸಿ ಈಗ ಷರತ್ತುಬದ್ಧ ಅನುಮತಿ ನೀಡಿದೆ. ರಥೋತ್ಸವ,ನಿರಂತಕವಾಗಿ ಒಂದು ವಾರ ನಡೇಯಲಿದೆ. ಮಂಗಳವಾರದಿಂದ ಪ್ರಾರಂಭ ಗೊಂಡ ರಥಯಾತ್ರೆಯಲ್ಲಿ ಕೇವಲ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಹಿಸಿದ್ದರು. ರಥೋತ್ಸವಕ್ಕೆ ಹೆಸರುವಾಸಿಯಾಗಿರುವ ಈ ದೇವಸ್ಥಾನ. ವಿಜ್ಞಾನಕ್ಕೂ ಮೀರಿದ ಅನೇಕ ನಿಗೂಢತೆಯನ್ನು ಹೊಂದಿದೆಯಲ್ಲದೇ ,ಅನೇಕ ವಿಸ್ಮಯಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿರುವ ದೇವಾಲಯ ಪುರಿ ಜಗನ್ನಾಥ .ಈ ದೇವಾಲಯದಲ್ಲಿ ನಡೆಯುತ್ತಿರುವ ಅದ್ಭುತಗಳು ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿದೆ!!ವಿಭಿನ್ನ ವಾಸ್ತುಶಿಲ್ಪಗಳು,ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳ ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಇದು ಒಂದು. ವರ್ಷವೀಡೀ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.ಜಗದ್ವಿಖ್ಯಾತ ರಥಯಾತ್ರೆಯನ್ನು ಕಣ್ತುಂಬಿ ಕೊಳ್ಳಲು ವೀದೇಶದಿಂದಲೂ ಯಾತ್ರಿಗಳು ಆಗಮಿಸುತ್ತಾರೆ. ಮೂರು ರಥಗಳು ಒಂಬತ್ತು ದಿನಗಳ ಕಾಲ ನಡೇಯುತ್ತದೆ.
ಸುಮಾರು 2.5ಕೀ.ಮೀ ದೂರ ರಥ ಯಾತ್ರೆ ಸಾಗುತ್ತದೆ ಪ್ರತಿವರ್ಷವೂ ನೂತನವಾಗಿಯೇ ರಥವನ್ನು ನಿರ್ಮಾಣ ಮಾಡಲಾಗುತ್ತದೆ, ರಥಕ್ಕಾಗಿ ಸುಮಾರು 23,000 ಸಿ ಎಪ್ ಟಿ ಮರವನ್ನು ತಯಾರಿಕೆಗೆ ಬಳಸುತ್ತಾರೆ.ಇಲ್ಲಿನ ವಿಶೇಷವೆಂದರೆ ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯದ ಪ್ರತಿಯೊಂದು ದೇವತೆಗಳ ವಿಗ್ರಹವನ್ನು ಕಲ್ಲು ಅಥವಾ ಲೋಹಗಳಿಂದ ಮಾಡಲಾಗುತ್ತದೆ. ಆದರೆ ಪುರಿ ಜಗನ್ನಾಥನ ದೇವಾಲಯದಲ್ಲಿ ಮಾತ್ರ ಜಗನ್ನಾಥ ಸ್ವಾಮಿಯ ವಿಗ್ರಹವು ಮರದಿಂದ ಕೆತ್ತನೆ ಮಾಡಲಾಗಿದೆ, ಈ ವಿಗ್ರಹವನ್ನು ಪ್ರತಿ 12 ವರ್ಷಕ್ಕೊಮ್ಮೆ ಮರದ ವಿಗ್ರಹವನ್ನು ಶಾಸ್ರ್ತೋಕ್ತವಾಗಿ ಬದಲಿಸಲಾಗುತ್ತದೆ. ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದ್ದೂ, ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗದಲ್ಲಿಯೇ ಹಾರಾಡುವುದು ಇಲ್ಲಿನ ವಿಶೇಷವಾಗಿದೆ. ಪ್ರತಿ ದಿನವೂ ಅರ್ಚಕರು 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ ಎಂಬ ಪ್ರತೀತಿ ಇದೆ. ಹಾಗಾಗಿ ಈ ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನು ಬದಲಾಯಿಸಿಲ್ಲ. ಸಾಮಾನ್ಯ ವಿಜ್ಞಾನ ಹೇಳುವಂತೆ, ಗಾಳಿ ಬೀಸುವ ದಿಕ್ಕಿನಲ್ಲಿ ಬಾವುಟ ಹಾರಬೇಕು. ಆದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರುತ್ತದೆ. ಜಗನ್ನಾಥ ಪ್ರಭಾವದಿಂದಲೇ ಇಂಥದ್ದೊಂದು ಪವಾಡ ನಡೆಯುತ್ತದೆ ಎಂದೇ ಜನರು ನಂಬುತ್ತಾರೆ. ಇನ್ನೊಂದು ವಿಶೇಷವೆಂದರೆ ಎಂಥಹ ಬಿಸಿಲಿದ್ದರೂ ದೇವಾಲಯದ ಗೋಪುರದ ನೆರಳು ಎಂದಿಗೂ ಕಾಣಿಸುವುದಿಲ್ಲ. ಇನ್ನು ಪ್ರಸಾದ ಮಾಡುವ ವಿಧಾನವೂ ಇಲ್ಲಿ ಬಹಳ ವಿಶೇಷವಾಗಿರುತ್ತದೆ. ಏಳು ಮಣ್ಣಿನ ಮಡಕೆಗಳನ್ನು ಪ್ರಸಾದ ತಯಾರಿಸಲು ಬಳಸುತ್ತಾರೆ. ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಆಶ್ಚರ್ಯವೆಂದರೆ ಮೇಲಿನ ಮಡಿಕೆ ಪ್ರಸಾದ ಬೆಂದ ನಂತರ ಕೆಳಗಿನ ಮಡಿಕೆಯ ಪ್ರಸಾದ ಬೇಯುತ್ತದೆ. ಒಟ್ಟಾರೆ ಈ ಎಲ್ಲಾ ವಿಶೇಷತೆಗೆ ಪವಾಡ ಪುರುಷ ಜಗನ್ನಾಥ ಪ್ರಭಾವ ವಲ್ಲದೇ ಮತ್ತಿನ್ನೇನು ? ಜೊತೆಗೆ ಸುಪ್ರಿಂ ಕೊರ್ಟ್ ಮನ ಪರಿವರ್ತನೆಗೂ ಕೂಡಾ!

Friday, 3 July 2020

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ, ಕುಂದಾಪುರ

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ, ಕುಂದಾಪುರ ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ. ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ. ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ದೇವಿಯಿಂದ ವರ ಪಡೆದು ಕಾರಣೀಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ. - ಪೌರಾಣಿಕ ಹಿನ್ನೆಲೆ: ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ ಶಿಕ್ಷೆ ಮೂಕನಾದ, ದೇವಿಯ ಭಕ್ತನಾಗಬೇಕೆಂಬ ತುಡಿತದಿಂದ ಭಕ್ತನಾದ. ದೇವಿಯನ್ನು ಸೇರಬೇಕು, ಮೋಕ್ಷ ಪಡೆಯಬೇಕೆಂಬ ಹಂಬಲ , ತಾಯಿಯನ್ನು ಮಹಾತ್ವಾಕಾಂಕ್ಷೆಯಿಂದ ವಿರೋಧಿಸಿ ಕುಕೃತ್ಯ ಎಸಗಿದ. ಕುಪಿತಳಾದ ಮಾತೆ ಬುದ್ಧಿಯ ಮಾತು ಕೇಳದ ಅಸುರನೊಂದಿಗೆ ಮಹಾರಣ. ರಾಕ್ಷಸ ಅಸುನೀಗಿದ ಈ ಸ್ಥಳವೇ ಮಾರಣಕಟ್ಟೆ . ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರನೆಂಬ ನಾಮವನ್ನಿತ್ತು, ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಅಂತಹ ಮಹಾಸ್ಥಳವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿ. ಮುಂದೆ ಕೊಲ್ಲೂರಿಗೆ ಬಂದ ಶ್ರೀ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾ ಪುರುಷರ ಪಾದದೂಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು. ಅಲ್ಲದೇ ಜನಪದಗಳಲ್ಲಿದ್ದಂತೆ ಬಾಯಿಂದ ಬಾಯಿಗೆ ಬಂದ ಜನರ ಮಾತಿನಂತೆ ಚಿತ್ತೂರು ಗುಡಿಕೇರಿ ಸಂಸ್ಥಾನ ಮನೆಯ ಚಂದಯ್ಯ ಶೆಟ್ಟಿ ಯವರ ಮನೆಯಲ್ಲಿ ದನಕಾಯುವ ಮಂಜನು ದನ ಕರುಗಳನ್ನು ಮೇಯಿಸಲು ತನ್ನ ಸಂಗಡಿಗರೊಂದಿಗೆ ಬ್ರಹ್ಮ ಗುಂಡಿಯ ಕಾಡಿನ ಕಡೆಗೆ ಹೋಗುತ್ತಾರೆ. ಆ ದನ ಕರುಗಳ ಗುಂಪಿನಲ್ಲಿ ಕಪಿಲೆಯೆಂಬ ದನವು ಪ್ರತಿ ದಿನ ಬ್ರಹ್ಮ ಗುಂಡಿಯ ಬಳಿ ಬಂದು ಶಿಲೆಯ ಮೇಲೆ ಹಾಲು ಸುರಿದು ಹೋಗುತ್ತಿತ್ತು. ಅದನ್ನು ಒಂದು ದಿನ ದನ ಕಾಯುವ ಮಂಜ ಕಪಿಲೆ ದನ ಹಿಂಡನ್ನು ಬಿಟ್ಟು ಕಾಡಿನ ಒಳಗೆ ಹೋಗುವುದನ್ನು ಹಿಂಬಾಲಿಸಿದ. ಆ ದನವು ಮುಂದೆ ಹೋಗಿ ಬ್ರಹ್ಮ ಗುಂಡಿಯ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಸುತ್ತಿರುವುದನ್ನು ನೋಡಿದನಂತೆ ಆ ವಿಷಯವನ್ನು ಮನೆಗೆ ಬಂದು ತನ್ನ ಮಡದಿ ಮಂಜಿಯಲ್ಲಿ ತಿಳಿಸಿದ.ಈ ವಿಚಾರವನ್ನು ಮನೆಯ ಯಜಮಾನರಾದ ಚಂದಯ್ಯ ಶೆಟ್ಟಿಯವರಿಗೆ ತಿಳಿಸುತ್ತಾರಂತೆ. ಅವರಿಗೆ ಇವರ ಮಾತಿನಿಂದ ನಂಬಿಕೆಬಾರದೇ ಅದನ್ನು ನೋಡಬೇಕೆಂದು ದನ ಕಾಯುವ ಮಂಜನೊಂದಿಗೆ ಒಂದು ದಿನ ಆ ಕಾಡಿಗೆ ಹೋಗಿ ಕಪಿಲೆ ದನವನ್ನು ಹಿಂಬಾಲಿಸಿಕೊಂಡು ಹೋಗುತ್ತಾರಂತೆ ಆ ದನವು ಬ್ರಹ್ಮ ಗುಂಡಿ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಯುದನ್ನು ನೋಡಿದರಂತೆ ಅವನು ಮನೆಗೆ ಹಿಂದಿರುಗಿ ಬಂದ ನಂತರ ಬ್ರಾಹ್ಮಣರನ್ನು ಕರೆಸಿ ಅವರಲ್ಲಿ ಈ ವಿಚಾರವನ್ನು ತಿಳಿಸಿದರಂತೆ ಆಗ ಅವರು ಈ ಶಿಲೆ ಇರುವ ಸ್ಥಳವು ಪ್ರಸಿದ್ಧ ಶಕ್ತಿ ಸ್ಥಳವಾಗಿದ್ದು ಈ ಹಿಂದೆ ಶ್ರೀ ದೇವಿಯು ಕಂಹಾಸುರನನ್ನು ವದಿಸಿ ಮೂಕಾಸುರನಾದಾಗ ಶ್ರೀ ದೇವಿಯಲ್ಲಿ ನಿನ್ನ ಭಕ್ತನಾಗಬೇಕೆಂದು ಹಂಬಲಿಸಿದಾಗ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಹರಸಿದಳು. ಮುಂದೆ ಈ ಕ್ಷೇತ್ರಕ್ಕೆ ಯತಿನ್ವರನೊಬ್ಬ ಬಂದ ನಂತರ ಈ ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕಟ್ಟೆಯಲ್ಲಿ ಈಶ್ವರಿ ಶಕ್ತಿಯು ಹೊಂದಿದಂತಹ ಈ ಸ್ಥಳವೇ ಬಹಳ ಶಕ್ತಿಯುತವಾದ ಬ್ರಹ್ಮಲಿಂಗೇಶ್ವರ ಎಂದು ಹೇಳುತ್ತಾರಂತೆ. ನೋವು-ನಲಿವು-ದುಖಃಗಳಿಗೆ ಅಭಯಧಾಮವಾದ ಈ ಕ್ಷೇತ್ರವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ. ಈ ಕ್ಷೇತ್ರದಲ್ಲಿ ಯಕ್ಷೆ, ಚಿಕ್ಕಮ್ಮ, ಹ್ಯಾಗುಳಿ ದೇವರೇ ಮೊದಲಾದ ದೇವತೆಗಳ ಬಳಗವು ಕಂಡುಬರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತಿರ್ಪು ಸಿಗುತ್ತದೆ. ಆದ್ದರಿಂದ ಮಂಜುನಾಥನ ಸನ್ನಿಧಿ ತೆಂಕಿನ ದೇವರಾದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಧನು ಸಂಕ್ರಮಣದಂದು ದೊಟ್ಟಿಕಾಲು ಚಿಕ್ಕು ದೇವರ ಪಾತ್ರಿ ಚಕ್ರ ಉಪನದಿಯನ್ನು ದಾಟುವುದು ಅಂತೆಯೇ ತುಳುನಾಡಿನಾದ್ಯಂತ ಭಕ್ತರ ಮನೆಯಲ್ಲಿ ಮೈ ದರ್ಶನ ಮಾಡುವುದು, ದರ್ಶನ ಪಾತ್ರಿ ಮಕರ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಹಾಜರಿರುವುದು ಇದರಿಂದ ತುಳು ನಾಡಿಗೂ ಈ ಕ್ಷೇತ್ರಕ್ಕೂ ಇರುವ ಸಂಬಂಧ ಕಂಡುಬರುತ್ತದೆ. ಪ್ರಾಚೀನತೆಯ ಕುರುಹುವಾಗಿ ಶೇಡಿಮರವೂ ಇದ್ದಿತ್ತು. ಅಂತೇಯೇ ಸನ್ಯಾಸಿ (ಯೋಗಿ)ಯೊಬ್ಬರಿಂದ ಪೂಜಿಸಲ್ಪಡುತ್ತಿತ್ತಂತೆ ಎಂಬುದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಬೆಟ್ಟು ಎನ್ನುವ ಸ್ಥಳವೂ ಸಮೀಪದಲ್ಲಿದೆ, ಅಂತಹ ಸನ್ಯಾಸಿಗಳು ಪರಿಚಾರಕರಾಗಿದ್ದು ಆದಿ ದ್ರಾವಿಡ ಮೂಲದವರು ಇಂದು ಶ್ರೀ ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿ ಬಂದು ನೆಲೆಸಿದ್ದಾರೆ. ಅವರ ಪೂರ್ವಜರ ಬಾಯಿಯಿಂದ ಬಾಯಿಗೆ ಬಂದ ನಾಡಿಗರ ಮಾತು ಈಗಲೂ ನಾವು ಕೇಳಬಹುದು. ಈ ಕ್ಷೇತ್ರದಲ್ಲಿ ದೈನಂದಿನ ವಿಧಿ ವಿಧಾನಗಳಿಗೆ ಪೂಜಾ ಅರ್ಚಕ ಕುಟುಂಬ ಮತ್ತು ಇತರ ಕೆಲಸಗಳಿಗೆ ಹೆಬ್ಬಾರರು, ಹುಟ್ಟಿನ ದೇವಾಡಿಗರು, ಮಡಿವಾಳರು, ಮೊಗವೀರರು, ವಿಶ್ವಕರ್ಮರು-ಕ್ಷೌರಿಕ ವರ್ಗದವರು ಇದ್ದಾರೆ. ಪೂರ್ವಕಾಲದಿಂದ ಶ್ರೀ ದೇವರ ಕೈಂಕರ್ಯ ದಲ್ಲಿ ತೊಡಗಿದ ವರ್ಗವಿದೆ. ಆಡಳಿತವನ್ನು ಚಿತ್ತೂರು ಗುಡಿಕೇರಿ ಮನೆಯವರು ಅನುವಂಶಿಕವಾಗಿ ಆಡಳಿತವನ್ನು ನೆಡೆಸುತ್ತಿದ್ದಾರೆ. ತಮ್ಮ ಕುಟುಂಬದ ಆಸ್ಥಿಯಲ್ಲಿ ದೇವಸ್ಥಾನಕ್ಕೆ ಉಂಬಳಿಗಾಗಿ ಬಿಟ್ಟಿರುತ್ತಾರೆ. ಈ ಕ್ಷೇತ್ರದ ದೇವಸ್ಥಾನ ಮತ್ತು ಹೆಬ್ಬಾಗಿಲನ್ನು ಕಟ್ಟುವಾಗ ಗುಡಿಕೇರಿಮನೆಯವರು ಸ್ವಂತ ನಗದು ಹಣ ಕೊರತೆಯಾಗಿ ಹಲ್ಸ್ ನಾಡು ಮನೆಯವರಿಗೆ ಭೂಮಿ ಅಡಮಾನ ಮಾಡಿದ ಲಿಖಿತ ಸರಕಾರಿ ದಾಖಲೆಗಳು ಪುಷ್ಟಿ ನೀಡುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತರ ಚಿಕ್ಕ- ಪುಟ್ಟ ದೇವಸ್ಥಾನಗಳು ಅಂದರೆ ಕೋಬಿಚಿಕ್ಕು, ವನದುಗರ್ಾದೇವಿ, ಹಿಜಾಣ ಚಿಕ್ಕು, ಕುಂಜ್ಞಾಡಿ ಹೈಗುಳಿ ಮೊದಲಾದ ದೇವತಾಸ್ಥಳಗಳೂ ಇವೆ. ತುಳುವ , ಕೊಂಕಣಿ, ಕನ್ನಡಿಗ, ಮಲೆಯಾಳಿ, ಮರಾಠಿ, ಹಿಂದಿ, ಅನೇಕ ಭಾರತೀಯ-ಎಲ್ಲಾ ಮತಗಳವರ ಅಭಯ ತಾಣವಾಗಿದೆ. ವಾರ್ಷಿಕ ಉತ್ಸವ:
ದೇವರ ಉತ್ಸವವು ಮಕರ ಸಂಕ್ರಾಂತಿಯಂದು ಪ್ರತಿ ವರ್ಷ ನೆಡೆಯುತ್ತದೆ. ಸನ್ನಿಧಿಗೆ ಪ್ರೀತಿಯ ಹರಕೆಗಳಾದ ಯಕ್ಷಗಾನ ಬಯಲಾಟ, ರಂಗಪೂಜೆ, ಚರುವಿನ ಪೂಜೆ, ಹೂವಿನ ಪೂಜೆ, ಮಂಗಳಾರತಿ, ಹರಿವಾಣ ನೈವೇದ್ಯ ಮೊದಲಾದ ಪೂಜೆ ದೇವರಿಗೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೇರವೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಯಕ್ಷೆ, ಹೈಗುಳಿ, ಚಿಕ್ಕು ದೇವತೆಗಳ ದರ್ಶನವಿದ್ದು ಈ ಮೈ ದರ್ಶನದಲ್ಲಿ ದೇವಸ್ಥಾನದ ಅನುವಂಶಿಕ ಮುಕ್ತೇಸರರ ಉಪಸ್ಥಿತಿಯಲ್ಲಿ ವಾಕ್ ತೀರ್ಮಾನ ಸಿಗುತ್ತದೆ. ಅಲ್ಲದೇ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ಪಡೆಯುತ್ತಾರೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ 2 ವಾರದ ಮುನ್ನ ದೇವರ ವಿಗ್ರಹವನ್ನು ವಿಸರ್ಜನೆ ಮಡಿ ಮಕರ ಸಂಕ್ರಾಂತಿಯಂದು ಪುನರ್ ಪ್ರತಿಷ್ಟೆ ಮಾಡಲಾಗುತ್ತದೆ. ಮಕರ ಸಂಕ್ರಾಂತಿಯಂದು ಮಧ್ಯಾಹ್ನ 12.00 ಘಂಟೆಗೆ ಅಬಿಜನ್ ಮುಹೂರ್ತದಲ್ಲಿ ಮಹಾಮಂಗಳಾರತಿಯೊಂದಿಗೆ ವಾರ್ಷಿಕ ಉತ್ಸವ ಜರುಗುತ್ತದೆ. ಹಾಲಬ್ಬದಲ್ಲಿ ಘಂಟೆ 10.30ಕ್ಕೆ ಕೆಂಡಸೇವೆ ಜರುಗುತ್ತದೆ. ಕೆಂಡಸೇವೆ ಆದ ಕೂಡಲೇ ದೇವರ ಮುಖ ಮಂಟಪದಲ್ಲಿ ದರ್ಶನ ಪಾತ್ರಿಗಳು ಕುಳಿತು ಕೆಂಡ ಕಾಣಿಕೆ ಲೆಕ್ಕ ಮಾಡಿ ದೇವಸ್ಥಾನದ ಅರ್ಚಕರಿಗೂ, ಸೇವಕರಿಗೂ, ಮಾಗಣಿಯವರಿಗೂ, ಪ್ರಸಾದ ಹಂಚುವಾಗ ಬೆಳ್ಳಿ ಕಾಣಿಕೆ ಹಾಕಿ ಕೊಡುವುದು ಮಾಮೂಲು ಪದ್ಧತಿ. ಇದಾದ ಕೂಡಲೇ ದೇವಸ್ಥಾನದ ಮೂಡುಬಾಗಿಲಿನಲ್ಲಿ ಆಡಳಿತದಾರನು ಬ್ರಾಹ್ಮಣರಿಗೆ, ಬ್ರಾಹ್ಮಣೇತರರಿಗೆ ಧರ್ಮ ಮಾಡುವುದು ವಾಡಿಕೆ. ಇದಾದ ನಂತರ ದಶಾವತಾರ ಮೇಳದವರಿಂದ ಸೇವೆ ನೆಡೆಯುತ್ತದೆ. ಜನವರಿ 15ರ ಬೆಳಿಗ್ಗೆ 10.00 ಘಂಟೆಗೆ ಮಂಡಲ ಸೇವೆ ನೆಡೆಯುತ್ತದೆ. ಅಲ್ಲದೇ ಚಿಕ್ಕು ದರ್ಶನದಲ್ಲಿ ಪಡುದಿಕ್ಕಿನಲ್ಲಿ ಕಡಕಟ್ಟುವಿನಲ್ಲಿ ಕುಳಿತು ಮುಕ್ತೇಸರರ ಉಪಸ್ಥಿತಿಯಲ್ಲಿ ಸನ್ನಿಧಾನದಿಂದ ನಂಬಿದ ಗಣಕ್ಕೆ ಪುಷ್ಪ ಕೊಡುವುದು ವಿಶೇಷ. ಅಲ್ಲದೇ ತುಲಾಭಾರ ಸೇವೆ ನೆಡೆಯುತ್ತದೆ. ಜನವರಿ 16ರಂದು ಬೆಳಗ್ಗೆ 10.00ಘಂಟೆಗೆ ಮಂಡಲ ಸೇವೆ ಆದ ನಂತರ ತುಲಾಭಾರ ಸೇವೆ ನೆಡೆಯುತ್ತದೆ. ನಂತರ ಪ್ರಸಾದ ವಿತರಣೆ ರಾತ್ರಿ ಕಡಬಿನ ಪೂಜೆ . ಜಾತ್ರೆಯಾದ ಒಂದು ವಾರದಲ್ಲಿ ಸಂಪ್ರೋಕ್ಷಣೆ. ಅಲ್ಲದೇ ಆಡಳಿತದಾರನ ಮನೆಯಲ್ಲಿ ಮೂರುದೇವರ ದರ್ಶನ ಉಂಟು ಮಾಡಿ ಅಲ್ಲಿ ಹಬ್ಬದಲ್ಲಿ ಕೆಲಸ ಮಾಡಿದ ಸಿಬ್ಬಂದಿಯವರಿಗೆ ಸಂಬಳ ಬಟವಾಡೆ ಮಾಡುವುದು ವಾಡಿಕೆ. ಅಲ್ಲದೇ ಬ್ರಾಹ್ಮಣರಿಗೂ, ಕುಟುಂಬದ ಸದಸ್ಯರಿಗೂ ಕಾಣಿಕೆ ನೀಡುವುದು ಮಾಮೂಲು ಪದ್ಧತಿ. ದೀಪೋತ್ಸವ: ಕಾರ್ತೀಕ ಮಾಸ ಕೃಷ್ಣ ಚತುರ್ದಶಿಯಂದು ದೇವಸ್ಥಾನದಲ್ಲಿ ದೀಪೋತ್ಸವ. ದೇವಸ್ಥಾನದ ಆದಿ ದೇವಸ್ಥಾನ ವೆಂಕಟರಮಣ ದೇವಸ್ಥಾನದಿಂದ ಈ ದೇವಸ್ಥಾನದವರೆಗೆ ದೀಪಾಲಂಕೃತಗೊಳಿಸಲಾಗುತ್ತದೆ, ಮೇಷ ಮಾಸ, ಸಿಂಹ ಮಾಸ, ವೃಶ್ಚಿಕ ಮಾಸಗಳಲ್ಲಿ ಚರುವಿನ ಪೂಜೆ , ಸೋಣೆ ತಿಂಗಳು ಸಿಂಹ ಮಾಸದಲ್ಲಿ ಸೋಣೆ ಆರತಿ ನೆಡೆಯುತ್ತದೆ. ಕುಂಭ ಸಂಕ್ರಮಣದಂದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ವಾಕ್ ತಿರ್ಮಾನಗಳನ್ನು ದೇವರದರ್ಶನದಲ್ಲಿ ಮಾಡಿಕೊಂಡು ಹೋಗುವುದು ವಿಶೇಷ. ವಶ್ಚಿಕ ಸಂಕ್ರಮಣದ ಮರುದಿನ ದೇವರ ತಾರಂಕುಲಕ್ಕೆ ಅನುಸಾರವಾಗಿ ದೇವಸ್ಥಾನದ ವತಿಯಿಂದ ದಶಾವತಾರ ಯಕ್ಷಗಾನ ಮೇಳ ಪ್ರಾರಂಭವಾಗಿ ಈ ಕ್ಷೇತ್ರದಲ್ಲಿ ಪ್ರಥಮ ಸೇವೆ ನೆಡೆಯುತ್ತದೆ. ಅದರ ಮರುದಿನ ಆಡಳಿತದಾರನ(ಗುಡಿಕೇರಿ) ಮನೆಯಲ್ಲಿ ಸೇವೆ ಆಟ ನೆಡೆಯುವುದು ಸ್ಥಳ ಪದ್ಧತಿ. ವೆಂಕಟರಮಣ ದೇವಸ್ಥಾನದಲ್ಲಿ ಸಿಂಹ ಮಾಸ, ಶುಕ್ಲ ಪಕ್ಷದ ಶ್ರಾವಣ ನಕ್ಷತ್ರದಂದು ಸೌರ ಋಗ್ ಉಪಕರ್ಮ ಆಚರಣೆ ಮಾಡಿ ನಂತರ ಅಲ್ಲಿ ಪೂಜಿಸಲ್ಪಟ್ಟ ಉಪವೀತವನ್ನು ಬ್ರಹ್ಮಲಿಂಗೇಶ್ವರ ದೇವರಿಗೆ ಹಾಕುವುದು ವಾಡಿಕೆ. ದೇವರ ಗುಡಿಗಳು:-ಶ್ರೀ ಚಕ್ರ ಪೀಠ: ಬ್ರಹ್ಮಲಿಂಗೇಶ್ವರ, ಯಕ್ಷಿ, ಮಲಿಯಾಳಿ ಯಕ್ಷಿ, ದೊಟ್ಟೆಕಾಲು ಚಿಕ್ಕು, ಪಲ್ಲಕ್ಕಿ ನಾಯಕ ಹಾಗೂ ಚಿಕ್ಕು ಪರಿವಾರ ದೇವರು ಹೊಸಿ ಹೈಗುಳಿ ಹಾಗೂ ಪರಿವಾರ ದೇವರು ಮತ್ತು ಹುಲಿ ದೇವರು. ಹಸಲು ತಿಮ್ಮ ಈ ದೇವರಿಗೆ ಬೇಸಾಯ ಮತ್ತು ಜಾನುವಾರುಗಳ ಬಗ್ಗೆ ಪೂಜೆಯನ್ನು ನೀಡುತ್ತಾರೆ. ಕಟ್ಟೆಯ ಮುಲಸ್ಥಾನದಲ್ಲಿ ಶ್ರೀ ಚಕ್ರ ಪೀಠ ಇದ್ದು ಆದಿ ಶಂಕರಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ಸ್ಥಳ. ದೇವರಿಗೆ ದಶಾವತಾರ ಮೇಳ ಅಂದರೆ ಬಹಳ ಪ್ರೇಮ. ಅಲ್ಲದೇ ರಂಗಪೂಜೆ, ರುದ್ರಾಭಿಷೇಕ, ತುಲಾಭಾರ, ಹೂವಿನ ಪೂಜೆ ಇಲ್ಲಿಯ ವಿಶೇಷ ಪೂಜೆಗಳು. ಉತ್ಸವಾದಿಗಳು: 1. ಮಕರಸಂಕ್ರಮಣ(ಜಾತ್ರೆ)ನಂತರ ಎರಡು ದಿನ ಮಂಡಲ ಉತ್ಸವ (ಜನವರಿ). 2.ಕುಂಭ ಸಂಕ್ರಮಣ(ಕಿರುಜಾತ್ರೆ)(ಫೆಬ್ರವರಿ). 3. ವರ್ಷದ ಮೂರು ಕಾಲದಲ್ಲಿ ಚರುವಿನಪೂಜೆ (ವೃಷ್ಚಿಕ ಮಾಸ, ಮೇಷ ಮಾಸ, ಸಿಂಹ ಮಾಸ). 4.ಸಂಪ್ರೋಕ್ಷಣೆ (ಜಾತ್ರೆಯ ನಂತರ). 5. ಸೌರಮಾನ ಯುಗಾದಿ(ಮೇಷ ಸಂಕ್ರಮಣದ ಮರುದಿನ). 6. ಸಿಂಹಮಾಸದಲ್ಲಿ ಸೋಣೆ ಆರತಿ(1 ತಿಂಗಳು. 7. ನವರಾತ್ರಿಯಲ್ಲಿ ಕದಿರು ಕಟ್ಟುವುದು. 8. ದೀಪಾವಳಿ 9. ದೀಪೋತ್ಸವ(ಕಾರ್ತಿಕ ಮಾಸ ಕೃಷ್ಣ ಚತುರ್ದಶಿ) ಸೇವಾ ವಿವರ: ಕ್ರ,ಸಂ ಸೇವೆ. ಸೇವಾ ದರ. 1. ಮಂಗಳಾರತಿ 40/- 2. ಹರಿವಾಣ ನೈವೇದ್ಯ 50/- 3. ರಂಗಪೂಜೆ ದೊಡ್ಡದು 500/- 4. ರಂಗಪೂಜೆ ಸಣ್ಣದು 300/- 5. ಕುಂಕುಮಾರ್ಚನೆ 20/- 6. ತುಲಾಭಾರ 1200/- 7. ಶತರುದ್ರಾಭಿಷೇಕ 500/- (ಭಂಡಾರ ಕಾಣಿಕೆ ಮತ್ತು ಸೇವಾಕಾಣಿಕೆ) 8. ಏಕದಶ ರುದ್ರಾಭಿಷೇಕ 100/- 9 ಏಕವಾರ ರುದ್ರಾಭಿಷೇಕ 150/- 10 ಹೂವಿನ ಪೂಜೆ 100/- 11 ಶುಕ್ರವಾರ ಪೂಜೆ(ಒಂದು ವರ್ಷಕ್ಕೆ) 100/- 12 ಪಂಚಾಮೃತ 50/- 13 ಚರುವಿನ ಪೂಜೆ 3500/- 14 ಸೋಣೆ ಆರತಿ (ಸಿಂಹ ಮಾಸದಲ್ಲಿ ಮಾತ್ರ) 10/- 15 ಕೆಂಡ ಸೇವೆ 35/- 16 ದೇವರ ದರ್ಶನದಲ್ಲಿ ತಿಳಿಸುವ ಕಾಣಿಕೆ 10/- 17 ಮದುವೆ ಕಾಣಿಕೆ 200/- 18 ಶಾಶ್ವತ ನಿತ್ಯ ಪೂಜೆ 500/- 19 ಶಾಶ್ವತ ರಂಗ ಪೂಜೆ 5000/- 20 ಶಾಶ್ವತ ಏಕ ವಾರ ರುದ್ರಾಭಿಷೇಕ 200/- 21 ಶಾಶ್ವತ ಮಂಗಳಾರತಿ 1000/- 22 ಒಂದು ದಿನದ ಅನ್ನ ದಾಸೋಹದ ಬಗ್ಗೆ 10101/- 23 ಯಕ್ಷಗಾನ ಸೇವೆ ಬುಕಿಂಗ್ 150/- 24 ಪಂಚ ಕಜ್ಜಾಯ 10/- 25 ತೀರ್ಥ ಪ್ರಸಾದ 5/- 26 ದೇವರ ಫೋಟೊ ಕೊಪಿ(ದೊಡ್ಡದು) 7/- 27 ದೇವರ ಫೋಟೊ ಕೊಪಿ(ಮದ್ಯಮ) 6/- 28 ದೇವರ ಫೋಟೊ ಕೊಪಿ(ಸಣ್ಣದು) 2/- ಆನುವಂಶೀಯ ಮೊಕ್ತೇಸರು: ಸೀತಾರಾಮ ಶೆಟ್ಟಿ. ಸಂಪರ್ಕ: ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಾರಣಕಟ್ಟೆ, ಅಂಚೆ ಮಾರಣಕಟ್ಟೆ, ಚಿತ್ತೂರು ಗ್ರಾಮ, ಕುಂದಾಪುರ ತಾಲ್ಲೂಕು ಉಡುಪಿ ಜಿಲ್ಲೆ-576233 ಮೊಬೈಲ್: 8762418665 ಕಛೇರಿ: 08254-239231 ಮಾರ್ಗ: ಕುಂದಾಪುರದಿಂದ ಕೊಲ್ಲೂರಿಗೆ ಹೊಗುವ ಮಾರ್ಗ ಮಧ್ಯೆ ಮಾರಣಕಟ್ಟೆ ಕ್ಷೇತ್ರವನ್ನು ಸಂದರ್ಶಿಸಬಹುದಾಗಿದೆ. ಕುಂದಾಪುರ - ಮಾರಣಕಟ್ಟೆ 24 ಕಿ.ಮೀ ಕೊಲ್ಲೂರು - ಮಾರಣಕಟ್ಟೆ 18.5 ಕಿ.ಮೀ ಚಿತ್ತೂರು - ಮಾರಣಕಟ್ಟೆ 1.5 ಕಿ.ಮೀ

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...