Wednesday, 15 July 2020

ಯಕ್ಷಗಾನ ಪ್ರಸಂಗ ಆರಂಭದ ಕ್ರಮ ಹೀಗಿತ್ತು !

ಸಾಧಾರಣ ಸುಮಾರು 60 - 65 ವರ್ಷಗಳ ಹಿಂದೆ ನಮ್ಮ ಹಿರಿಯರ ನೆನಪಿನ ಪ್ರಕಾರ ಯಕ್ಷಗಾನ *ಆರಂಭ ಆಗುವ ಕ್ರಮ* ಹೇಗಿತ್ತು ? ▪️ಮುಸ್ಸಂಜೆ ಹೊತ್ತಿನಲ್ಲಿ ಅಂದರೆ ಸಾಧಾರಣ 6.30 ರ ವೇಳೆಗೆ ಕೇಳಿ ಬಡಿಯುವುದು. (ಆಗ ಧ್ವನಿವರ್ಧಕಗಳು ಇಲ್ಲದ ಕಾರಣ, ಆ ಊರಿನ ಎತ್ತರದ ಜಾಗೆಯಲ್ಲಿ ನುಡಿಸುವ ಕ್ರಮವೂ ಇತ್ತಂತೆ, ಪ್ರದರ್ಶನ ಜರಗುವ ಪೂರ್ವ ಮಾಹಿತಿ ಮತ್ತು ಮುನ್ಸೂಚನೆಗೂ ಆಗಿರಬಹುದೆಂಬ ಅಭಿಮತ) ▪️7.30 ಕ್ಕೆ ಸರಿಯಾಗಿ ಚೌಕಿಪೂಜೆ ಆದ ನಂತರ ಪ್ರಸಾದ ಸ್ವೀಕರಿಸಿ ಕೋಡಂಗಿ ದೀವಟಿಗೆ ಜೊತೆ ರಂಗಕ್ಕೆ ಬರುವುದು. ( ಬಣ್ಣದ ವೇಷಧಾರಿಗಳು, ಚುಟ್ಟಿ ಇಡಲು ಆರಂಭಿಸಿ, ಚುಟ್ಟಿ ಇಟ್ಟದ್ದು ಗಟ್ಟಿಯಾಗಲೇ ಸರಿಸುಮಾರು ಐದಾರು ಗಂಟೆ ತಗೊಳುತಿತ್ತಂತೆ) ▪️ರಂಗಸ್ಥಳ ಪೀಠಿಕೆ. (ಹಿಮ್ಮೇಳದ ನುಡಿತ, ಯಕ್ಷಗಾನದಲ್ಲಿ ಉಪಯೋಗಿಸುವ ಎಲ್ಲಾ ತಾಳಗಳನ್ನು ನುಡಿಸಲು ವೇದಿಕೆಯಾಗಿಯೂ, ಮೇಳದಲ್ಲೇ ಇರುವ ಪ್ರಥಮಾಭ್ಯಾಸಿಗೆ ಅನುಕೂಲವಾಗಲು ಈ ಕ್ರಮದ ಉಪಯೋಗ ಎಂಚ ಮಾತಿದೆ.) ▪️ಮುದದಿಂದ ನಿನ್ನ ಪದ್ಯದಿಂದ ರಾಮಭದ್ರ ಗೋವಿಂದ ಪದ್ಯದವರಗೆ ಕೋಡಂಗಿಗಳ ಕುಣಿತ. ಇದಕ್ಕೆ ಸುಮಾರು ಒಂದು ಗಂಟೆ ಹಿಡಿಯುತ್ತಿತ್ತು. (ಕೋಡಂಗಿಗಳ ವೇಷವನ್ಬು, ಸಾಧಾರಣ ಬಾಲಕಲಾವಿದರೇ ನಿರ್ವಹಿಸುತಿದ್ದರು. ಇದಕ್ಕೂ ಒಂದು ಮೂಲ ಕಾರಣವಿದೆ. ಸಭಾಕಂಪನದ ತೊಂದರೆ, ಅಂಜಿಕೆ ದೂರವಾಗಿ, ರಂಗಸ್ಥಳದ ನಡೆ ನಾಟ್ಯದ ಗತಿಮಿತಿ ಅರಿಯುವ ಬುನಾದಿಗಾಗಿ ಎಂಬುದಕ್ಕಾಗಿ) ▪️ಆಮೇಲೆ ಹರೇ ರಮಣ ಪದ್ಯಕ್ಕೆ ಬಾಲಗೋಪಾಲರ ಪ್ರವೇಶ. (ಬಲರಾಮ ಮತ್ತು ಗೋಪಾಲಕೃಷ್ಣರು.ಹಿಂದೆ ಬಲ ಗೋಪಾಲರು ಎಂದು ಬಳಕೆಯಲ್ಲಿದ್ದ ಪದ ಪ್ರಯೋಗವು ಈಗ ಬದಲಾವಣೆ ಹೊಂದಿ ಬಾಲಗೋಪಾಲರು ಎಂದಾಗಿದೆ.) . ▪️ಚೌಕಿಯಿಂದ ದೇವರನ್ನು ರಂಗಕ್ಕೆ ತರುವುದು. ಬಾಲ ಗೋಪಾಲರ ಕುಣಿತ ಮುಂದುವರಿಯುತ್ತದೆ ಜೊತೆಗೆ ಕೋಡಂಗಿ ವೇಷಗಳು ಇರಬೇಕು. ಇಲ್ಲಿ ಸುಮಾರು ಒಂದು ಗಂಟೆಯ ಕುಣಿತವಿರುತ್ತದೆ. ನಂತರ ಚೌಕಿಗೆ ನಿರ್ಗಮನ. (ದೇವರು ಬಂದು ರಥದಲ್ಲಿ ಕುಳಿತುಕೊಳ್ಳುವಾಗ, ರಂಗಸ್ಥಳದಲ್ಲಿ ಕುಳಿತಿರುವ ಹಿಮ್ಮೇಳದವರೂ ನಿಂತು, ನುಡಿಸಿ ಹಾಡುವ ಗೌರವದ ಸಂಪ್ರದಾಯ ಈಗಲೂ ಇದೆ.) ▪️ಷಣ್ಮುಖ ಸುಬ್ರಾಯ ವೇಷದ ಪ್ರವೇಶ. (ಹಿಂದೆ ಈ ಎಲ್ಲಾ ಪಾತ್ರಗಳನ್ನು ನಾಟ್ಯ ಕಲಿಯಲು ಬಂದ ವಿದ್ಯಾರ್ಥಿಗಳೇ ಮಾಡುತ್ತಿದ್ದುದು. ಕಾರಣ ಈಗಿನಂತೆ ನಾಟ್ಯ ತರಗತಿಗಳು ನಡೆಯುತ್ತಿರಲಿಲ್ಲ. ನಾಟ್ಯ ಕಲಿಯಬೇಕಾದರೆ ಮೇಳದಲ್ಲಿಯೇ ಇದ್ದು ಕಲಿಯಬೇಕಿತ್ತು, ಪ್ರಸ್ತುತ ಈ ವೇಷ ಮರೆಯಾಗಿದೆ ). ▪️ಷಣ್ಮುಖ ಸುಬ್ರಾಯ ವೇಷದ ನಿರ್ಗಮನದ ನಂತರ ಮುಖ್ಯ ಸ್ತ್ರೀ ವೇಷ ಬರುವುದು. (ಹಿಂದೆ ಮುಖ್ಯ ಸ್ತ್ರೀ ವೇಷವು ಒಂದೇ ಇತ್ತು). ಜೊತೆಗೆ ಒಂದು ಹೊಗಳಿಕೆ ವೇಷ. ▪️ಚಂದಭಾಮಾ ಸ್ತ್ರೀ ವೇಷ. (ಈಗ ಈ ವೇಷವು ಮರೆಯಾಗಿದ್ದು ಇದನ್ನು ಮುಖ್ಯ ಸ್ತ್ರೀ ವೇಷದ ಜೊತೆ ಸೇರಿಸಿ ಈಗ ಎರಡು ಮುಖ್ಯ ಸ್ತ್ರೀ ವೇಷಗಳಾಗಿವೆ). ▪️ಚಪ್ಪರಮಂಚ ಸ್ತ್ರೀ ವೇಷ . (ಇದು ಮರೆಯಾಗಿದೆ) ▪️ಅರ್ಧನಾರೀ ವೇಷ. (ಈ ವೇಷವೂ ಪ್ರಸ್ತುತ ಇಲ್ಲ) ▪️ಅರೆಪ್ಪಾವಿನ ಆಟ(ಹಾವಾಡಿಗರ ಕುಣಿತ), ಕೊಕ್ಕೆ ಚಿಕ್ಕಿನ ಹಾಸ್ಯ, ರಂಗರಂಗಿ ಹಾಸ್ಯ ಮುಂತಾದ ಹಲವು ಕಟ್ಟು ಹಾಸ್ಯಗಳಿದ್ದವು. (ಈ ಕಟ್ಟು ಹಾಸ್ಯಗಳಲ್ಲಿ ಯಾವುದೇ ರೀತಿಯ ನಿಬಂಧನೆಗಳು ಇರಲಿಲ್ಲ. ಕಲಾವಿದರು ಅವರಿಗೆ ತೋಚಿದ ಹಾಸ್ಯವನ್ನು ರಂಗದಲ್ಲಿ ಬಂದು ಅಭಿನಯಿಸುತ್ತಿದ್ದರು. ಈ ಎಲ್ಲಾ ಪಾತ್ರಗಳಿಗೂ ಯಾವುದೇ ರೀತಿಯ ನಿಯಮಗಳು, ಸಮಯದ ಮಿತಿ ಇವೆಲ್ಲ ಯಾವುದೂ ಇರಲಿಲ್ಲ. ಮೇಳದ ಯಜಮಾನ, ಕಲಾವಿದರು ಇವರ ಹೊಂದಾಣಿಕೆಯಲ್ಲಿ ವೇಷಗಳು ರಂಗಕ್ಕೆ ಬರುತ್ತಿದ್ದವು). ಹಾಸ್ಯಗಾರರ ನಿರ್ಗಮನ ▪️ಪ್ರಸಂಗ ಪೀಠಿಕೆ. ▪️ಕಚ್ಚೆ ಸ್ತ್ರೀ ವೇಷ(ತೆಂಕುತಿಟ್ಟಿನಲ್ಲಿ ಇದಕ್ಕೆ ಪೀಠಿಕೆ ಸ್ತ್ರೀ ವೇಷ ಎಂದೂ ಹೇಳುತ್ತಾರೆ)ದ ಪ್ರವೇಶ. ▪️ಒಡ್ಡೋಲಗ. (ಸಾಧಾರಣವಾಗಿ ದೇವೆಂದ್ರನ ಒಡ್ಡೋಲಗವೇ ಚಾಲ್ತಿಯಲ್ಲಿ ಇತ್ತು, ಈಗಲೂ ಹಲವು ಮುಂದುವರಿದಿದೆ.) ಪಾಂಡವರ ಒಡ್ಡೋಲಗವಿದ್ದರೆ , ಕೃಷ್ಣನ ತೆರೆಕುಣಿತ, ರಾಮಲಕ್ಷಣರ ತೆರೆಕುಣಿತವೂ ಮೊದಲಿನ ಸಂಪ್ರದಾಯದಲ್ಲಿತ್ತಂತೆ ▪️ಪ್ರಸಂಗ ಆರಂಭ... ಹಿಂದೆ ಇಷ್ಟೆಲ್ಲಾ ಪಾತ್ರಗಳು ರಂಗಕ್ಕೆ ಬಂದು ಪಾತ್ರ ನಿರ್ವಹಿಸಲು ಚೌಕಿಪೂಜೆಯ ನಂತರ ಸುಮಾರು 4 ರಿಂದ 4.30 ಗಂಟೆಗಳಷ್ಟು ಸಮಯ ಹಿಡಿಯುತ್ತಿತ್ತು. ಸಾಧಾರಣವಾಗಿ 7.30 ಕ್ಕೆ ಚೌಕಿಪೂಜೆ ಆಗಿ ನಂತರ ಪ್ರಸಂಗ ಆರಂಭ ಆಗುವಾಗ ಸುಮಾರು 11.30 ಯಿಂದ 12 ಗಂಟೆಗಳಾಗುತ್ತಿತ್ತು. ಮಾಹಿತಿ ಸಂಗ್ರಹ : *ಯಕ್ಷಭಾಗವತಹಂಸ ಗ್ರೂಪ್*

No comments:

Post a Comment

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...